ಕೊಡಗು-ಕೇರಳ ಗಡಿಯಲ್ಲಿ ಮದ್ಯ ಮಾರಾಟ ಮಾಡುವಂತ್ತಿಲ್ಲ : ಆದರೂ ಅಕ್ರಮ ನಡೆಯುತ್ತಿರುವ ಶಂಕೆ

24/07/2020

ಮಡಿಕೇರಿ ಜು.24 : ಕೊಡಗು-ಕೇರಳ ಗಡಿ ಪ್ರದೇಶವಾದ ಕುಟ್ಟದಲ್ಲಿ ಲಾಕ್‍ಡೌನ್ ನಂತರವೂ ಮದ್ಯ ಮಾರಾಟ ನಿರ್ಬಂಧಿಸಿರುವುದರಿಂದ ಅಕ್ರಮವಾಗಿ ಬೇರೆ ಜಾಗದಿಂದ ಮದ್ಯವನ್ನು ತಂದು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕುಟ್ಟದಲ್ಲಿ ಮದ್ಯ ಮಾರಾಟ ನಿರ್ಬಂಧಿಸಿರುವುದರಿಂದ ಇತರ ಪ್ರದೇಶಗಳಾದ ಶ್ರೀಮಂಗಲ, ಕಾನೂರು, ಪೊನ್ನಂಪೇಟೆ ಇತ್ಯಾದಿ ಸ್ಥಳಗಳಿಂದ ಮದ್ಯಗಳನ್ನು ತಂದು ಕುಟ್ಟ ವ್ಯಾಪ್ತಿಯಲ್ಲಿ ಅಧಿಕ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಹಲವೆಡೆ ಶಾಲಾ ಮಕ್ಕಳಿಂದ ಮದ್ಯ ಮಾರಾಟ ಮಾಡಿಸಲಾಗುತ್ತಿದೆ. ಮದ್ಯದ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಗಡಿ ಭಾಗದಲ್ಲಿ ಮದ್ಯ ಮಾರಾಟ ನಿರ್ಬಂಧದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂದ ಕುಟ್ಟ ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಮುಕ್ಕಾಟಿರ ನವೀನ್ ಆರೋಪಿಸಿದ್ದಾರೆ.
ಗಡಿ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಿ ಸಮೀಪದ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಕಳ್ಳ ವ್ಯವಹಾರಕ್ಕೆ ಆಸ್ಪದ ಮಾಡಿಕೊಟ್ಟಂತಾಗಿದೆ. ಸರಕಾರಕ್ಕೆ ಹಣ ಪಾವತಿಸಿ ಪರವಾನಗಿಯನ್ನು ಪಡೆದುಕೊಂಡಿರುವ ಮದ್ಯ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವುದರಿಂದ ಕಾನೂನು ಬದ್ಧವಾಗಿ ನ್ಯಾಯಯುತ ಬೆಲೆಯಲ್ಲಿ ಸ್ಥಳೀಯರಿಗೆ ಮದ್ಯ ದೊರೆಯುತ್ತದೆ. ಸರಕಾರಕ್ಕೂ ತೆರಿಗೆ ಸಲ್ಲುತ್ತದೆ. ಇದರಿಂದ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೂಡಲೇ ಮದ್ಯ ಮಳಿಗೆ ತೆರೆದು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅವರು ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.