ಜು.27 ರಂದು ಕೊಡಗು ಜೆಡಿಎಸ್ ಯುವ ಘಟಕ ಪುನರ್ ರಚನೆ

24/07/2020

ಮಡಿಕೇರಿ ಜು. 24 : ಯುವ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್‍ಸ್ವಾಮಿ ಅವರ ಸೂಚನೆಯಂತೆ ಜಿಲ್ಲೆಯಲ್ಲಿ ಯುವ ಘಟಕವನ್ನು ಹೆಚ್ಚು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಸಮಿತಿಗಳನ್ನು, ಎಲ್ಲಾ ತಾಲ್ಲೂಕು, ಹೋಬಳಿ ಘಟಕಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಜಾಶಿರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಯುವ ಸಮೂಹಕ್ಕೆ ಆದ್ಯತೆ ನೀಡುವ ಬಗ್ಗೆ ಚರ್ಚಿಸಲು ಜು.27 ರಂದು ಬೆಳಗ್ಗೆ 10.30 ಗಂಟೆಗೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಸೇರಿದಂತೆ ಪಕ್ಷದ ಯುವ ಮುಖಂಡರು ಹಾಗೂ ಮುಂಚೂಣಿ ನಾಯಕರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಸಮಿತಿಗಳನ್ನು ಪುನರ್ ರಚಿಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕೆ.ಜಿ.ಜಾಶಿರ್ ತಿಳಿಸಿದ್ದಾರೆ.