ಸರ್ಕಾರ ಸ್ವತ: ತನಿಖೆಗೆ ಒಳಪಡಲಿ : ಕಾಂಗ್ರೆಸ್ ಒತ್ತಾಯ

24/07/2020

ಮಡಿಕೇರಿ ಜು.24 : ಕೊರೋನಾ ನಿರ್ವಹಣಾ ವೈದ್ಯಕೀಯ ಕಿಟ್‍ಗಳ ಖರೀದಿ ವ್ಯವಹಾರದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಅವ್ಯವಹಾರ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸತ್ಯಾಂಶ ಬಯಲಿಗೆಳೆಯಲು ನ್ಯಾಯಾಧೀಶರು ಹಾಗೂ ತಾಂತ್ರಿಕ ವಿಭಾಗದ ಪರಿಣಿತರನ್ನು ನೇಮಕ ಮಾಡುವ ಮೂಲಕ ಸರ್ಕಾರ ಸ್ವತ: ತನಿಖೆಗೆ ಒಳಪಡಲಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ವೆಂಕಪ್ಪ ಗೌಡ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಪರಿಕರಗಳ ಖರೀದಿಯ ಬಿಲ್‍ಗಳೇ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕ್ಷಿ ಹೇಳುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಖರೀದಿಗಾಗಿ ಖರ್ಚು ಮಾಡಿದ ಹಣದಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಟೀಕಿಸಿದರು.
ಸರ್ಕಾರದ ಪ್ರತಿನಿಧಿಗಳು ಬಾಯಿ ಮಾತಿನಲ್ಲಿ ಭ್ರಷ್ಟಚಾರ ನಡೆದಿಲ್ಲವೆಂದು ಸ್ಪಷ್ಟೀಕರಣ ನೀಡಿದರಷ್ಟೇ ಸಾಲದು, ಬದಲಿಗೆ ಪ್ರಮಾಣಿಕತೆ ಇದೆಯೆಂದಾದರೆ ನ್ಯಾಯಾಧೀಶರು ಹಾಗೂ ತಾಂತ್ರಿಕ ವಿಭಾಗದ ತಜ್ಞರನ್ನು ನೇಮಕ ಮಾಡಿ ಸರ್ಕಾರ ತನಿಖೆಗೆ ಒಳಪಟ್ಟು ಜನರಿಗೆ ಸತ್ಯವನ್ನು ತಿಳಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.
ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಕೆಪಿಸಿಸಿ ಗಂಭೀರ ಆರೋಪ ಮಾಡಿರುವಾಗ ನೇರವಾಗಿ ಮುಖ್ಯಮಂತ್ರಿಗಳೇ ಸ್ಪಷ್ಟೀಕರಣ ನೀಡಬೇಕಿತ್ತು. ಆದರೆ ಮುಖ್ಯಮಂತ್ರಿಗಳಿಗೆ ತಮ್ಮ ಅಧಿಕಾರಿಗಳ ಬಗ್ಗೆ ಅಷ್ಟೊಂದು ವಿಶ್ವಾಸವಿದ್ದಂತೆ ಕಾಣುತ್ತಿಲ್ಲವೆಂದು ವೆಂಕಪ್ಪ ಗೌಡ ಆರೋಪಿಸಿದರು.
ಕೊರೋನಾ ಸೋಂಕು ಗ್ರಾಮೀಣ ಭಾಗದವರೆಗೂ ವ್ಯಾಪಕವಾಗಿ ಹಬ್ಬಿದ್ದು, ಇದನ್ನು ನಿಯಂತ್ರಿಸಲು ಟಾಸ್ಕ್‍ಪೋರ್ಸ್ ಸಮಿತಿಯನ್ನು ರಚಿಸಲು ಸರ್ಕಾರ ಆದೇಶ ಮಾಡಿದೆಯಾದರೂ ಇಲ್ಲಿಯವರೆಗೆ ಇದು ಕಾರ್ಯರೂಪಕ್ಕೆ ಬಂದಿಲ್ಲ. ಇದೇ ಕಾರಣಕ್ಕೆ ಕೆಪಿಸಿಸಿಯೇ “ಆರೋಗ್ಯ ಅಭಯ ಹಸ್ತ” ಕಾರ್ಯಕ್ರಮದ ಮೂಲಕ ಪ್ರತೀ ಬೂತ್ ಮಟ್ಟದಲ್ಲಿ ಇಬ್ಬರು ಪ್ರತಿನಿಧಿಗಳನ್ನು ನೇಮಿಸಿ ಸ್ಥಳೀಯ ಜನರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದೆ. ಅಲ್ಲದೆ ಈ ಪ್ರತಿನಿಧಿಗಳಿಗೆ ಭದ್ರತೆಗಾಗಿ ತಲಾ 2 ಲಕ್ಷ ರೂ. ಗಳ ವಿಮೆಯನ್ನು ಕೆಪಿಸಿಸಿಯೇ ಮಾಡಿಸುತ್ತಿದೆ ಎಂದರು.
ಸೋಂಕು ವ್ಯಾಪಿಸುವುದನ್ನು ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದ್ದು, ಜನರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜನಹಿತಕ್ಕೆ ವಿರುದ್ಧವಾಗಿದೆ. ಗ್ರಾಮೀಣ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದಾಗಿದೆ ಎಂದು ವೆಂಕಪ್ಪಗೌಡ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಅಪ್ರು ರವೀಂದ್ರ, ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರಾ ಮೈನ ಉಪಸ್ಥಿತರಿದ್ದರು.