ಸಂಸದರೇ ಎಲ್ಲಿದ್ದೀರಪ್ಪಾ ? : ಪ್ರತಾಪ್ ಸಿಂಹ ವಿರುದ್ಧ ಕೊಡಗು ಕಾಂಗ್ರೆಸ್ ಅಸಮಾಧಾನ

24/07/2020

ಮಡಿಕೇರಿ ಜು.24 : ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆ ಅವೈಜ್ಞಾನಿಕವಾಗಿದ್ದು, ಜನರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸಕರು ಹಾಗೂ ಸಂಸದರು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಸಂಸದರನ್ನು ಎಲ್ಲಿದ್ದೀರಪ್ಪ ಎಂದು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಯಾವುದೇ ಕಷ್ಟಗಳಿಗೆ ಸ್ಪಂದಿಸದ ಸಂಸದರೂ ಭಾವನಾತ್ಮಕ ವಿಚಾರಗಳನ್ನು ಕೆಣಕಲು ಮತ್ತು ಚುನಾವಣೆ ಸಂದರ್ಭ ಮತಯಾಚಿಸಲು ಮಾತ್ರ ಬರುತ್ತಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಕೊರೋನಾ ನಿರ್ವಹಣೆ ಅವೈಜ್ಞಾನಿಕವಾಗಿದ್ದು, ಸೀಲ್‍ಡೌನ್ ಪ್ರದೇಶದ ನಿವಾಸಿಗಳನ್ನು ಪ್ರಾಣಿಗಳಂತೆ ಕಾಣಲಾಗುತ್ತಿದೆ. ಯಾವುದೇ ಸೌಲಭ್ಯವನ್ನು ಒದಗಿಸದೆ ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ ಎಂದು ಟೀಕಿಸಿದರು.
::: ವೈರಸ್ ಇರುವುದೇ ಅನುಮಾನ :::
ಜಿಲ್ಲೆಯಲ್ಲಿ 314 ಸೋಂಕಿತರನ್ನು ಗುರುತಿಸಲಾಗಿದ್ದು, 73 ಸಕ್ರಿಯ ಪ್ರಕರಣಗಳು ಉಳಿದುಕೊಂಡಿವೆ, ಉಳಿದವರು ಗುಣಮುಖರಾಗಿದ್ದು, ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿಕೆ ನೀಡುತ್ತಿದೆ. ಒಂದು ಕಡೆ ಕೊರೋನಾಗೆ ಔಷಧಿ ಇಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಮತ್ತೊಂದೆಡೆ ಪಾಸಿಟಿವ್ ಪ್ರಕರಣದ ರೋಗಿಗಳು ಐದು ದಿನಗಳÀ ಚಿಕಿತ್ಸೆಯ ನಂತರ ಆರನೇಯ ದಿನ ಗುಣಮುಖರೆಂದು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ವೈರಸ್ ಇದೆಯೇ, ಇಲ್ಲವೇ ಅಥವಾ ವಿನಾಕಾರಣ ಸರ್ಕಾರ ವೈಭವಿಕರಿಸುತ್ತಿದೆಯೇ ಎನ್ನುವ ಸಂಶಯ ಮೂಡುತ್ತಿದೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದರು.
ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತು ಕೆಪಿಸಿಸಿಯೇ ಜನರ ನೆರವಿಗೆ ಧಾವಿಸಿದ್ದು, ಆರೋಗ್ಯ ಅಭಯ ಹಸ್ತ ಪ್ರತಿನಿಧಿಗಳ ಕಾರ್ಯಚಟುವಟಿಕೆ ಇನ್ನು ಒಂದು ವಾರದಲ್ಲಿ ಆರಂಭಗೊಳ್ಳಲಿದೆ. ಕೆಪಿಸಿಸಿಯ ವೈದ್ಯರ ತಂಡದಿಂದ ತರಬೇತಿ ಪಡೆದ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ಜನರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್‍ನೊಳಗಿನ ಭಿನ್ನಾಭಿಪ್ರಾಯದ ಕುರಿತು ಮಾತನಾಡಿದ ಮಂಜುನಾಥ್ ಕುಮಾರ್, ಪಕ್ಷಕ್ಕೆ ನಿಷ್ಠರಾಗಿರುವವರು ಯಾರೂ ಗೊಂದಲವನ್ನು ಸೃಷ್ಟಿಸುತ್ತಿಲ್ಲ, ಬದಲಿಗೆ ಪಕ್ಷದಲ್ಲಿ ಕ್ರಿಯಾಶೀಲರಲ್ಲದವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ನಾನು ಹತಾಶನಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.
ವೆಂಕಪ್ಪ ಗೌಡ ಮಾತನಾಡಿ, ಭಿನ್ನಾಭಿಪ್ರಾಯದ ಕುರಿತು ವರಿಷ್ಠರ ಗಮನ ಸೆಳೆಯಲಾಗಿದೆ ಎಂದರು.