ಹಳೇ ವಿನ್ಯಾಸದಲ್ಲಿಯೇ ಕೋಟೆ ಕಟ್ಟಡ ಅಭಿವೃದ್ಧಿಯಾಗಲಿ : ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯ

ಮಡಿಕೇರಿ ಜು.24 : ನಗರದ ಕೋಟೆಯಲ್ಲಿ ಕೊಡಗಿನ ರಾಜರು, ಮೂಲ ನಿವಾಸಿಗಳು, ಕೊಡಗಿನ ಸಂಪ್ರದಾಯ ಮತ್ತು ಆಚಾರ ವಿಚಾರಗಳು ಎಲ್ಲರಿಗೂ ತಿಳಿಸುವಂತೆ ಒಂದು ಉತ್ತಮ ಸಂಗ್ರಹಾಲಯವಾಗಬೇಕು. ಅಂಡಮಾನ್ ನಿಕೋಬಾರ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಗ್ರಹಾಲಯವು ಇದ್ದು, ಅದೇ ಮಾದರಿಯಲ್ಲಿ ಕೋಟೆಯಲ್ಲಿಯೂ ಸಹ ಸಂಗ್ರಹಾಲಯ ನಿರ್ಮಾಣ ಮಾಡಬೇಕು ಎಂದು ಮಡಿಕೇರಿ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಅವರು ಹೇಳಿದರು.
ನಗರದ ಪುರಾತನ ರಾಜರ ಕೋಟೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು.
ಕೋಟೆಯ ಹಳೆಯ ಸ್ವರೂಪವನ್ನು ಉಳಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಾಗಬೇಕು. ನಗರದ ಕೋಟೆ ಈ ಹಿಂದೆ ಇದ್ದ ರೀತಿಯಲ್ಲಿಯೇ ಅಭಿವೃದ್ಧಿಪಡಿಸಿ ಕಾಮಗಾರಿ ಪೂರ್ಣಗೊಳಿಸುವಂತಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ನಿರ್ದೇಶನ ನೀಡಿದರು.
ಕೋಟೆ ಕಾಮಗಾರಿಯ ಸಂಬಂಧ ನ್ಯಾಯಾಲಯದ ಆದೇಶದ ಮೇರೆಗೆ ಈಗಾಗಲೇ ಸರ್ಕಾರದಿಂದ 8 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.
ನಮ್ಮ ಚಿಂತನೆ ಇರುವುದು ಹಳೆಯ ರೀತಿಯಲ್ಲೇ ಕೋಟೆ ಉಳಿಯಬೇಕು. ಅದೇ ನಿಟ್ಟಿನಲ್ಲಿ ಕಟ್ಟಡದ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳು ಆಗಬಾರದು. ಮೂಲ ವಿನ್ಯಾಸದಲ್ಲಿಯೇ ರಾಜರ ಕೋಟೆ ಕಟ್ಟಡ ಅಭಿವೃದ್ಧಿಯಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ತಿಳಿಸಿದರು.
ಈಗಾಗಲೇ ಕೋಟೆ ಒಳಭಾಗದಲ್ಲಿದ್ದ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸಗಳು ನಡೆದಿದೆ. ಕೋಟೆ ಆವರಣದಲ್ಲಿಯೇ ಹಳೆಯ ಕಾರಾಗೃಹ ಮತ್ತು ನ್ಯಾಯಾಲಯವಿದ್ದು ಅದನ್ನು ಸಂರಕ್ಷಿಸಿ ಉತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭ ಕೋಟೆಯಲ್ಲಿ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ವಸಂತ್, ರಾಘವೇಂದ್ರ ಇತರರು ಇದ್ದರು.



