ವಿದ್ಯಾರ್ಥಿಗಳಿಗೆ ಕೆಂಪುಕೋಟೆಗೆ ಪ್ರವೇಶವಿಲ್ಲ

25/07/2020

ನವದೆಹಲಿ ಜು.25 : ನೋವಾಲ್ ಕೊರೋನಾ ವೈರಸ್ ಕಾರಣದಿಂದಾಗಿ ರಾಷ್ಟ್ರ ರಾಜಧಾನಿ ಕೆಂಪು ಕೋಟೆಯಲ್ಲಿ ನಡೆಯಲಿರುವ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿಲ್ಲ. ಕೆಲವೇ ಮಂದಿ ಗಣ್ಯರಷ್ಟೇ ಭಾಗವಹಿಸುವ ಸಾಧ್ಯತೆ ಇದೆ.
ಡಾಕ್ಟರ್, ಆರೋಗ್ಯ ಕಾರ್ಯಕರ್ತೆಯರು, ಪೌರ ಕಾರ್ಮಿಕರಂತಹ ಕೋವಿಡ್-19 ವಾರಿಯರ್ಸ್ ಗಳನ್ನು ಗಣ್ಯರಾಗಿ ಆಹ್ವಾನಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕೊರೋನಾ ವೈರಸ್ ಕಾರಣ ಕೆಂಪು ಕೋಟೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಕಡಿಮೆ ಸಂಖ್ಯೆಯ ಗಣ್ಯರನ್ನು ಆಹ್ವಾನಿಸಲಾಗುವುದು, ಅವರಿಗೆ ಆರು ಅಡಿಗಳ ಅಂತರದಂತೆ ಆಸನಗಳ ವ್ಯವಸ್ಥೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಹಾಗೂ ಸ್ಯಾನಿಟೈಸ್ ಕಾರ್ಯಕ್ಕಾಗಿ ಆ.1 ರಿಂದ ಕೆಂಪು ಕೋಟೆಯನ್ನು ಸಾರ್ವಜನಿಕ ವೀಕ್ಷಣೆಗೆ ಬಂದ್ ಮಾಡಲಾಗಿದ್ದು, ಶಾಲಾ ಮಕ್ಕಳಿಂದ ಪ್ರದರ್ಶನ ಇರುವುದಿಲ್ಲ, ಇದರ ಬದಲಿಗೆ ಕೆಲ ಎನ್ ಸಿಸಿ ಕೆಡಿಟ್ ಗಳನ್ನು ಆಹ್ವಾನಿಸಲಾಗುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು, ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.