ಕರ್ನಾಟಕದ ಇತಿಹಾಸ ಪ್ರಸಿದ್ಧ ಪವಿತ್ರ ಪುಣ್ಯಸ್ಥಳ ಕನಕಾಚಲಪತಿ ದೇವಾಲಯ

25/07/2020

ಕನಕಗಿರಿ ಕರ್ನಾಟಕದ ಸುಪ್ರಸಿದ್ದ ಹಾಗೂ ಇತಿಹಾಸ ಪ್ರಸಿದ್ಧ ಪವಿತ್ರ ಪುಣ್ಯಸ್ಥಳ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಕನಕಗಿರಿ ವಿಜಯನಗರ ಸಂಸ್ಥಾನದ ರಾಜಧಾನಿಯಾಗಿದ್ದ ಹಂಪಿಗೆ ಸನಿಹದಲ್ಲೇ ಇದೆ. ಕಾಲಿದ್ದವರಿಗೆ ಹಂಪೆ, ಕಣ್ಣಿದ್ದವರಿಗೆ ಕನಕಗಿರಿ ಎಂಬ ಮಾತು ಈ ಭಾಗದಲ್ಲಿ ಜನಜನಿತ.

ಐತಿಹ್ಯ :
ಕನಕಗಿರಿಗೆ ಈ ಹೆಸರು ಬಂದ ಬಗ್ಗೆ ಒಂದು ಕಥೆ ಇದೆ. ಗಿರಿ ಎಂದರೆ ಬೆಟ್ಟ ಇಲ್ಲಿರುವ ಬೆಟ್ಟದಲ್ಲಿ ಕನಕಮುನಿಗಳು ತಪವನ್ನಾಚರಿಸಿ, ಇಲ್ಲಿ ಸುವರ್ಣ ಮಳೆ ಸುರಿಸಿದರೆಂದು, ಬೆಟ್ಟದ ಮೇಲೆ ಚಿನ್ನ ಅರ್ಥಾತ್ ಕನಕವೃಷ್ಟಿಯಾದ ಕಾರಣ ಈ ಗಿರಿಗೆ ಕನಕಗಿರಿ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಸ್ಕಾಂದ ಪುರಾಣದ ತುಂಗಾಮಹಾತ್ಮೆಯಲ್ಲಿ ಕೂಡ ಕನಕಗಿರಿಯ ಸ್ಥಳವರ್ಣನೆ ಇದೆ ಕನಕಾಚಲಪತಿಯ ಅಷ್ಟೋತ್ತರವೂ ಇದೆ. ಪುರಂದರದಾಸರು, ವಿಜಯದಾಸರು, ಜಗನ್ನಾಥ ದಾಸರು ಈ ದೇವರ ಬಗ್ಗೆ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ. ಈ ಗಿರಿ ಪ್ರದೇಶದಲ್ಲಿ ಪುಷ್ಪ, ಜಯಂತಿ, ಗುಪ್ತಗಾಮಿನಿಯಾದ ಗೋಪಿಕಾ ನದಿಗಳು ಹರಿಯುವ ಕಾರಣ ಇದು ಪುಣ್ಯ ಕ್ಷೇತ್ರವೆನಿಸಿದೆ.

ಇತಿಹಾಸ :
ಇತಿಹಾಸ ತಜ್ಞರ ಪ್ರಕಾರ ಮೌರ್ಯ ದೊರೆ ಅಶೋಕ ಚಕ್ರವರ್ತಿ ಕನಕಗಿರಿಯನ್ನು ದಕ್ಷಿಣ ಭಾರತದ ತನ್ನ ರಾಜಧಾನಿ ಮಾಡಿಕೊಂಡಿದ್ದನೆಂದೂ ಅಭಿಪ್ರಾಯಪಡುತ್ತಾರೆ. 2ನೇ ಶತಮಾನದ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲಮಿ ಉಲ್ಲೇಖಿಸಿರುವ ಕಲ್ಲಿಗೇರಿಸ್ ಎಂಬ ಸ್ಥಳವೇ ಕನಕಗಿರಿ ಇರಬೇಕು ಎಂದೂ ಇತಿಹಾಸ ತಜ್ಞರು ಹೇಳುತ್ತಾರೆ.

ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಳಚೂರ್ಯರು, ವಿಜಯನಗರದ ಅರಸರು, ಮರಾಠರು ಹಾಗೂ ಮೈಸೂರು ಹುಲಿ ಟಿಪ್ಪೂ ಸುಲ್ತಾನ್ ಆಳಿದ ಈ ನಾಡು ವಿಜಯನಗರದರಸರ ಪಾಳೆಯಗಾರ ಗುಜ್ಜಲ ವಂಶಸ್ಥರಿಂದ ಆಳಲ್ಪಟ್ಟಿದೆ. ಇತಿಹಾಸ ಪ್ರಸಿದ್ಧ ಕುಮಾರರಾಮನ ತಾಯಿ ಹರಿಯಾಲ ದೇವಿ ಈ ಗುಜ್ಜಲ ವಂಶಕ್ಕೆ ಸೇರಿದವಳೆಂದೂ ಇತಿಹಾಸಕಾರರು ಊಹಿಸುತ್ತಾರೆ. ಈ ಊರಿನ ಗ್ರಾಮದೇವತೆ ಉಡುಚುಲಮ್ಮ ಅಂದರೆ ರೋಗ ನಿರೋದಕ ದೇವತೆ ಎಂದೂ ಹೇಳಲಾಗಿದೆ.

ನಿರ್ಮಾಣ :
ಗುಜ್ಜರ ವಂಶದ ಮೊದಲ ದೊರೆ ಪರಸಪ್ಪ ನಾಯಕ (1436-1510)ನ ಕನಸಿನಲ್ಲಿ ಕಾಣಿಸಿಕೊಂಡು ತಿರುಪತಿ ಗಿರಿವಾಸ ಶ್ರೀವೆಂಕಟೇಶ ಕನಕಗಿರಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀನರಸಿಂಹನಾಗಿ ತಾನು ನೆಲೆಸಿ ಭಕ್ತರ ಬೇಡಿಕೆ ಈಡೇರಿಸುವುದಾಗಿ ತಿಳಿಸಿದನಂತೆ. ಈ ವಿಷಯವನ್ನು ಆತ ತನ್ನ ಸಾಮ್ರಾಟ ವಿಜಯನಗರದ ಅಧಿಪತಿ ಪ್ರೌಢದೇವರಾಯನಿಗೆ ನಿವೇದಿಸಿಕೊಂಡನಂತೆ. ಆಗ ವಿಜಯನಗರದ ಅರಸರು 12ಗ್ರಾಮಗಳನ್ನು ಆತನಿಗೆ ಉಂಬಳಿ ನೀಡಿ, ಪಾಳೆಯ ಪಟ್ಟ ಕಟ್ಟಿ ಕನಕಾಚಲಪತಿಗೆ ನಿತ್ಯ ಪೂಜೆ ನಡೆಸಲು ಆದೇಶಿಸಿದರು.

ಇದುವೇ ದೇವಾಲಯದ ಸ್ಥಾಪನೆಗೆ ಕಾರಣವಾಯ್ತು. ನಂತರದ ದಿನಗಳಲ್ಲಿ ಸ್ವಾಮಿಯ ಮಹಿಮೆ ಅರಿತ ವಿಜಯನಗರದ ದೊರೆಗಳಾದ ಸಾಳ್ವ ನರಸಿಂಹ, ಶ್ರೀಕೃಷ್ಣದೇವರಾಯರು, ಅಚ್ಚ್ಯುತರಾಯರು ಕನಕಾಚಲಪತಿಯ ಭಕ್ತರಾದರೆಂದು ಇತಿಹಾಸ ಹೇಳುತ್ತದೆ. ಕನಕಗಿರಿಯ ನಾಯಕರಿಗೂ, ಚಿತ್ರದುರ್ಗದ ಪಾಳೆಯಗಾರ ನಡುವೆ ಸ್ನೇಹ ಸಂಬಂಧವಿತ್ತೆಂದು, ಈ ಎರಡೂ ವಂಶಗಳ ನಡುವೆ ವೈವಾಹಿಕ ಸಂಬಂಧವಿತ್ತೆಂದೂ ತಿಳಿದುಬರುತ್ತದೆ.