ಲಕ್ಷಾಂತರ ಮೌಲ್ಯದ ಬೀಟೆ ನಾಟ ಸಹಿತ ವಾಹನ ವಶ : ಆರೋಪಿಗಳು ಪರಾರಿ

July 25, 2020

ಮಡಿಕೇರಿ ಜು. 25 : : ಕುಶಾಲನಗರ ಸಮೀಪದ ಶುಂಠಿಕೊಪ್ಪ ವ್ಯಾಪ್ತಿಯಲ್ಲಿ ಅಕ್ರಮ ಬೀಟೆ ಸಾಗಾಟ ಪ್ರಕರಣವನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿಗಳು ಪತ್ತೆಹಚ್ಚಿ ಲಕ್ಷಾಂತರ ಮೌಲ್ಯದ ಬೀಟೆ ಮರ ವಶಪಡಿಸಿಕೊಂಡಿದ್ದಾರೆ.
ಶುಂಠಿಕೊಪ್ಪ ಸಮೀಪದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಕಡಿದು ಬೀಟೆ ಮರದ ಸಾಗಾಟದಲ್ಲಿ ತೊಡಗಿ ಜೀಪ್ ಒಂದರಲ್ಲಿ ನಾಟ ಸಾಗಾಟ ಮಾಡುತ್ತಿದ್ದ ಸಂದರ್ಭ ಕುಶಾಲನಗರ ಅರಣ್ಯ ವಲಯಾಧಿಕಾರಿ ಅನನ್ಯಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಆರೋಪಿಗಳಾದ ಹದ್ದುಶ ಮತ್ತು ರಜಾಕ್ ಎಂಬವರುಗಳು ಪರಾರಿಯಾಗಿದ್ದಾರೆ. ಜೀಪ್ ಸೇರಿದಂತೆ ಸುಮಾರು 4 ಲಕ್ಷ ರು ಮೌಲ್ಯದ ನಾಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮತ್ತು ಎಸಿಎಫ್ ಕೆ.ಎ.ನೆಹರು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ಮತ್ತೊಂದು ಪ್ರಕರಣದಲ್ಲಿ 7ನೇ ಹೊಸಕೋಟೆ ಗ್ರಾಮದಲ್ಲಿ ತೇಗದ ಮರದಿಂದ ಕಟ್‍ಸೈಜ್‍ಗಳನ್ನು ಅಕ್ರಮ ದಾಸ್ತಾನು ಮಾಡಿದ ಆರೋಪದ ಮೇರೆಗೆ ಗ್ರಾಮದ ನಿವಾಸಿ ಸುರೇಶ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆನೆಕಾಡು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಹದೇವನಾಯಕ್ ಮತ್ತು ಸಿಬ್ಬಂದಿಗಳು ಆರೋಪಿಯ ಮನೆ ಶೋಧ ನಡೆಸಿ ತೇಗದ ಕಟ್‍ಸೈಜ್‍ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದ್ದಾರೆ. ಸುಮಾರು ರು 50 ಸಾವಿರ ಮೌಲ್ಯದ ಮರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.