ಸೋಂಕಿನ ಪ್ರಮಾಣ ಹೆಚ್ಚಳ ಸಾಧ್ಯತೆ : ಅಗತ್ಯ ಸಹಕಾರಕ್ಕೆ ಜಿಲ್ಲಾಧಿಕಾರಿ ಮನವಿ

25/07/2020

ಮಡಿಕೇರಿ ಜು.25 : ಮಂಗಳೂರು, ಮೈಸೂರಿನಂತೆ ಕೊಡಗು ಜಿಲ್ಲೆಯಲ್ಲೂ ಮುಂದಿನ ದಿನಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಅಧಿಕವಾಗುವ ಸಾಧ್ಯತೆಯಿದ್ದು, ಇದನ್ನು ಎದುರಿಸಲು ಎಲ್ಲರೂ ಒಗ್ಗಟ್ಟಿನಿಂದ ಸಜ್ಜಾಗುವಂತೆ ಮತ್ತು ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಜನತೆಯೊಂದಿಗೆ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸೋಂಕಿತರಲ್ಲಿ ಶೇ.76ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ರಾಜ್ಯದ ಇತರೆಡೆಗಳಿಗೆ ಹೋಲಿಸಿದರೆ ಇದು ಉತ್ತಮ ಸ್ಥಿತಿಯಲ್ಲಿದೆ. ಗುಣಮುಖ ಪ್ರಮಾಣ ಹೆಚ್ಚಿಸಿ ಮರಣ ಪ್ರಮಾಣ ಇಲ್ಲದಂತೆ ಮಾಡಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರಿಂದಾಗಿ ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ತಿಳಿಸಿದರು.
ಕೊಡಗಿನ ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳಿವೆ. ಪ್ರತೀ ತಾಲೂಕಿನಲ್ಲಿ ಒಂದು ವಾರದಲ್ಲಿ 500 ಹಾಸಿಗೆಯುಳ್ಳ ಕೋವಿಡ್ ಕೇರ್ ಕೇಂದ್ರ ಸ್ಥಾಪನೆ, 10 ವೆಂಟಿಲೇಟರ್‍ಗಳ 56 ಹಾಸಿಗೆಗಳ ಐಸಿಯು ವ್ಯವಸ್ಥೆಯನ್ನು ಕೋವಿಡ್ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.
ಪರೀಕ್ಷಾ ವರದಿ ಬರದÀವರನ್ನು ಕೊವೀಡ್ ಆಸ್ಪತ್ರೆಯಿಂದ 2-3 ದಿನಗಳಲ್ಲಿ ವಾಪಾಸ್ ಮನೆಗೆ ಕಳುಹಿಸಲಾಗಿದ್ದು, ಇದರಿಂದ ಗೊಂದಲ ಉಂಟಾಗಿತ್ತು. ಈಗ ಪರೀಕ್ಷಾ ವರದಿ ಬೇಗ ಬರಲಿರುವುದರಿಂದ ಸಮಸ್ಯೆಯಿಲ್ಲ. ಗುಣಮುಖರಾದವರನ್ನು 10 ದಿನಗಳಲ್ಲಿ ಮನೆಗೆ ಕಳುಹಿಸಲಾಗುತ್ತದೆ. ಅಂತಹವರು ಆಸ್ಪತ್ರೆಯಲ್ಲಿ 10 ದಿನ ಹಾಗೂ ನಂತರ ಮನೆಯಲ್ಲಿ 14 ದಿನ ಸೇರಿದಂತೆ ಒಟ್ಟು 24 ದಿನ ಸಂಪರ್ಕ ತಡೆಯಲ್ಲಿರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ನಿಯಂತ್ರಿತ ಪ್ರದೇಶಗಳ ಬಗ್ಗೆ ಅನೇಕ ಪ್ರಶ್ನೆಗಳು ಕೇಳಿ ಬರುತ್ತಿವೆ. ಆದರೆ ಕಂಟೈನ್ಮೆಂಟ್ ಪ್ರದೇಶಗನ್ನು ದೇಶದಲ್ಲಿ ಒಂದೇ ರೀತಿಯಲ್ಲಿ ಗುರುತಿಸಲಾಗುತ್ತಿದೆ. ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ದೂರ ದೂರ ಇರುವುದರಿಂದ ಅಂತಹ ಮನೆಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ 107 ಕಂಟೈನ್ಮೆಂಟ್ ಪ್ರದೇಶಗಳಿದ್ದು, ಗ್ರಾ.ಪಂ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ನಿಯಂತ್ರಿತ ಪ್ರದೇಶಗಳಲ್ಲಿರುವ ನಿವಾಸಿಗಳು ಸಂಪರ್ಕ ಹೊಂದುವ ಬಗ್ಗೆ ಜಾಗ್ರತೆ ಹೊಂದಿರಬೇಕು. ಜುಲೈ ಅಂತ್ಯದವರೆಗೂ ಈಗಿನ ನಿಯಮವೇ ಜಾರಿಯಲ್ಲಿರಲಿದ್ದು, ಮುಂದೆ ಸರಕಾರದ ಆದೇಶದಂತೆ ನಿರ್ಧರಿಸಲಾಗುತ್ತದೆ. ಅಲ್ಲಿವರೆಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಕಂಟೈನ್ಮೆಂಟ್ ಝೋನ್‍ಗಳಲ್ಲಿ ಪ್ರತೀ 2 ದಿನಗಳಿಗೊಮ್ಮೆ ಸ್ಯಾನಿಟೈಸ್ ಮಾಡುವುದು ಕಡ್ಡಾಯವಾಗಿದೆ. ಇದನ್ನು ಪಾಲಿಸದಿದ್ದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಂಟ್ರೋಲ್ ರೂಮ್ ಸಂಖ್ಯೆ 1077 ಗೆ ಕರೆ ಮಾಡಿ ಮಾಹಿತಿ ನೀಡುವಂತೆಯೂ ಅವರು ಸಲಹೆ ನೀಡಿದರು.
ಕೋವಿಡ್ ಸೋಂಕಿತರಿಗೆ ಕೇವಲ ವಿಟಮಿನ್ ಸಿ, ಝಿಂಕ್ ಮಾತ್ರೆಗಳನ್ನು ನೀಡಲಾಗುತ್ತಿದೆ. ಬೇರೆ ಯಾವುದೇ ಔಷಧಿ ನೀಡುತ್ತಿಲ್ಲ ಎಂಬ ದೂರುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಂಕಿತನ ಆರೋಗ್ಯ ಸ್ಥಿತಿಯನ್ನು ಗಮನಿಸಿ ವೈದ್ಯರು ಸೂಕ್ತ ಔಷಧಿ ನೀಡುತ್ತಾರೆ. ಚಿಕಿತ್ಸೆ ಬಗ್ಗೆ 4 ಹಂತಗಳಲ್ಲಿ ಪರಿಶೀಲನೆ ನಡೆಯುತ್ತಿದ್ದು, ನೀಡಲಾಗುವ ಔಷಧಿ ಬಗ್ಗೆ ಗೊಂದಲ ಬೇಡ ಎಂದು ಹೇಳಿದರು.
ಪರೀಕ್ಷೆಗೆ ದ್ರವ ನೀಡಿದ ಮೇಲೆ ವ್ಯಕ್ತಿ ಸಾವನ್ನಪ್ಪಿದರೆ, ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ಕೈಗೊಳ್ಳಬೇಕಾಗುತ್ತದೆ. 20 ಜನರಿಗಿಂತ ಹೆಚ್ಚು ಜನ ಪಾಲ್ಗೊಳ್ಳದೆ ಸರ್ಕಾರದ ಆದೇಶ ಪಾಲಿಸಬೇಕೆಂದರು. ಮದುವೆ ಮತ್ತು ಅಂತ್ಯಕ್ರಿಯೆಗೆ ಕಡಿಮೆ ಜನರು ಪಾಲ್ಗೊಂಡು ಇತರರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ಪರೀಕ್ಷಾ ವರದಿ ನೀಡಿದವರು ವರದಿ ಬರುವವರೆಗೆ ಮನೆಯಲ್ಲೇ ಇರಿ. ಪಾಸಿಟೀವ್ ವರದಿ ಬಂದರೂ ಆತಂಕ ಬೇಡ ಎಂದು ಕಿವಿಮಾತು ಜಿಲ್ಲಾಧಿಕಾರಿಗಳು ಹಿರಿಯ ನಾಗರಿಕರು ಅತ್ಯಂತ ಹೆಚ್ಚಿನ ಎಚ್ಚರಿಕೆ ವಹಿಸಿ. ಬೇರೇ ಬೇರೆ ಕಾಯಿಲೆಗಳಿರುವ ಹಿರಿಯ ನಾಗರಿಕರನ್ನು ಕಾಳಜಿಯಿಂದ ಗಮನಿಸಿ. ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಿ ಎಂದೂ ಸಲಹೆ ನೀಡಿದರು.