ಜನಸ್ನೇಹಿಯಾದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ

26/07/2020

ಮಡಿಕೇರಿ ಜು.26 : ಪ್ರಧಾನಿ ನರೇಂದ್ರಮೋದಿ ಅವರ ಹೆಸರಿನ ಸಮುದಾಯ ಭವನವನ್ನು ನಿರ್ಮಿಸಿ ಜನಸಾಮಾನ್ಯರಿಗೆ ಸಹಕಾರಿಯಾಗಿದ್ದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಇದೀಗ ಮತ್ತೊಂದು ಜನಸ್ನೇಹಿ ಕಾರ್ಯ ಸಾಧಿಸಿದೆ.
ಸಂಘ ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆಯಲ್ಲಿ ಅಂಚೆ ಕಚೇರಿ ಮತ್ತು ಚೆಸ್ಕಾಂ ಕಚೇರಿ ಕಾರ್ಯ ನಿರ್ವಹಿಸಲಿದೆ. ಅಲ್ಲದೆ ಸಂಘದ ಸದಸ್ಯರ ನೆರವಿಗಾಗಿ ಎಟಿಎಂ ಕೂಡ ಆರಂಭಗೊಳ್ಳಲಿದೆ. ಇಂದು ಅಂಚೆ ಕಚೇರಿ ಉದ್ಘಾಟನೆಗೊಂಡಿದ್ದು, ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರು ವ್ಯವಹಾರಕ್ಕೆ ಚಾಲನೆ ನೀಡಿದರು.
ಸಧ್ಯದಲ್ಲಿಯೇ ಚೆಸ್ಕಾಂ ಕಚೇರಿ ಕಾರ್ಯಾರಂಭ ಮಾಡಲಿದೆ. ಡಿಸಿಸಿ ಬ್ಯಾಂಕ್ ಮೂಲಕ ಚೆಟ್ಟಳ್ಳಿ, ನಂಜರಾಯಪಟ್ಟಣ ಹಾಗೂ ಮಾಲ್ದಾರೆ ಸಹಕಾರ ಸಂಘಕ್ಕೆ ಎಟಿಎಂ ಮಂಜೂರಾಗಿದ್ದು, ಚೆಟ್ಟಳ್ಳಿ ಸಹಕಾರ ಸಂಘದ ಮಳಿಗೆಯಲ್ಲಿ ಎಟಿಎಂ ಶೀಘ್ರ ಆರಂಭಗೊಳ್ಳಲಿದೆ ಎಂದು ಮಣಿಉತ್ತಪ್ಪ ತಿಳಿಸಿದರು.
ನರೇಂದ್ರಮೋದಿ ಸಮುದಾಯ ಭವನವನ್ನು ಸಭೆ, ಸಮಾರಂಭಗಳಿಗೆ ಜನಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ನೀಡುತ್ತಾ ಜನಸ್ನೇಹಿಯಾಗಿ ಗಮನ ಸೆಳೆದಿದ್ದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಇದೀಗ ಒಂದೇ ಕಟ್ಟಡದಲ್ಲಿ ಅಂಚೆ ಕಚೇರಿ, ಚೆಸ್ಕಾಂ ಮತ್ತು ಎಟಿಎಂ ಗೆ ಅವಕಾಶ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದೆ.