ಕೊರೋನಾ ಸೋಂಕಿಗೆ ಕೊಡಗಿನಲ್ಲಿ ಮತ್ತೊಂದು ಬಲಿ : ಮೃತರ ಸಂಖ್ಯೆ 6 ಕ್ಕೆ ಏರಿಕೆ

26/07/2020

ಮಡಿಕೇರಿ ಜು.26 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಜೀವ ಬಲಿಯಾಗಿದ್ದು, ಮೃತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಭಾನುವಾರ ಐದು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 348 ಆಗಿದೆ.
ವೀರಾಜಪೇಟೆ ಮೊಗರಗಲ್ಲಿಯ ನಿವಾಸಿ 46 ವರ್ಷದ ಪುರುಷರೊಬ್ಬರು ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದು, ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಈ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದು, ಶುಕ್ರವಾರ ವೀರಾಜಪೇಟೆಯ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ರೋಗಗಳ ಲಕ್ಷಣ ಪತ್ತೆಗಾಗಿ ವೀರಾಜಪೇಟೆಯ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಈ ಸಂದರ್ಭ ಅವರಲ್ಲಿ ಟೈಫಾಯ್ಡ್ ಇರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಆ ಜ್ವರಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಜ್ವರ ಕಡಿಮೆಯಾಗದ ಕಾರಣ ಜು.25ರಂದು ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು.
ಆದರೆ ಭಾನುವಾರ ಬೆಳಗ್ಗಿನ ಜಾವ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಆಸ್ಪತ್ರೆ ತಲುಪುವ ಮೊದಲೇ ಅವರು ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮೃತದೇಹದ ಗಂಟಲು ದ್ರವ ಪರೀಕ್ಷೆಯನ್ನು ಆಂಟಿಜೆನ್ ಕಿಟ್ ಮೂಲಕ ಮಾಡಿಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಮೃತದೇಹದ ಅಂತ್ಯ ಸಂಸ್ಕಾರವನ್ನು ಸರಕಾರದ ಮಾರ್ಗಸೂಚಿಯಂತೆ ನೆರವೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.
::: ಐವರಲ್ಲಿ ಸೋಂಕು ದೃಢ ::: ಮತ್ತೊಂದೆಡೆ ಭಾನುವಾರ ಮಡಿಕೇರಿಯ ಸ್ಟ್ಟಿವರ್ಟ್‍ಹಿಲ್ ರಸ್ತೆಯ 43 ವರ್ಷದ ಪುರುಷ, ಆಜಾದ್ ನಗರದ ಜ್ವರ ಲಕ್ಷಣವಿದ್ದ 30 ವರ್ಷದ ಮಹಿಳೆ, ಪುಟಾಣಿನಗರದ 43 ವರ್ಷದ ಪುರುಷ, ಕುಶಾಲನಗರ ಸಮೀಪದ ಹುಲುಸೆ ಗ್ರಾಮದ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 78 ವರ್ಷದ ಮಹಿಳೆ ಹಾಗೂ ಬೆಂಗಳೂರು ಪ್ರಯಾಣದ ಇತಿಹಾಸವಿದ್ದು, ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿರುವ 30 ವರ್ಷದ ಗರ್ಭಿಣಿ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 348ಕ್ಕೆ ಏರಿಕೆಯಾಗಿದ್ದು, ಈ ಪೈಕಿ 249 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರು ಮಂದಿ ಸಾವಿಗೀಡಾಗಿದ್ದು, 93 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದೆ ಘೋಷಿಸಲಾಗಿದ್ದ ಕುಶಾಲನಗರದ ಬೈಚನಹಳ್ಳಿ, ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆ, ಕೋಣ ಮಾರಿಯಮ್ಮ ದೇವಾಲಯ ರಸ್ತೆ, ಶಿವರಾಮ ಕಾರಂತ ಬಡಾವಣೆ, ಚೆಟ್ಟಳ್ಳಿಯ ಚೇರಳ ಶ್ರೀಮಂಗಲ, ಸೋಮವಾರಪೇಟೆಯ ಗೋಪಾಲಪುರ, ಕಾರೆಕೊಪ್ಪ, ಹೆಬ್ಬಾಲೆ ಅಂಬೇಡ್ಕರ್ ನಗರ ಒಂದು ಮತ್ತು ಎರಡು, ಮಡಿಕೇರಿಯ ಪ್ಯಾರಿಸ್ ಬಾಣೆ, ಚಾಮರಾಜ ಬಂಗ್ಲೆ, ಪುಟಾಣಿನಗರ, ಸುಂಟಿಕೊಪ್ಪ ಸರಕಾರಿ ಆಸ್ಪತ್ರೆ ಹಿಂಭಾಗ, ವೀರಾಜಪೇಟೆ ತೋರ, ಗೋಣಿಕೊಪ್ಪದ ವಿಜಯನಗರ ಬಡಾವಣೆ ಸೇರಿದಂತೆ 14 ನಿಯಂತ್ರಿತ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಮಡಿಕೇರಿಯ ಆಜಾದ್‍ನಗರ ಮಸೀದಿ ಬಳಿ, ಪುಟಾಣಿ ನಗರದ ಚಾಮರಾಜ ಬಂಗ್ಲೆ ಮುಂಭಾಗ ಹಾಗೂ ವೀರಾಜಪೇಟೆಯ ಮೊಗರ ಗಲ್ಲಿಯಲ್ಲಿ ಹೊಸದಾಗಿ ಕಂಟೈನ್ಮೆಂಟ್ ಪ್ರದೇಶಗಳನ್ನು ತೆರೆಯಲಾಗಿದೆ ಎಂದು ಹೇಳಿದ್ದಾರೆ.