ವೀರರ ನಾಡಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ : ಹುತಾತ್ಮ ಯೋಧರಿಗೆ ಗೌರವ ಅರ್ಪಣೆ

26/07/2020

ಮಡಿಕೇರಿ ಜು.26 : ಭಾರತ-ಪಾಕಿಸ್ತಾನದ ನಡುವೆ 1999ರಲ್ಲಿ ನಡೆದ ಕಾರ್ಗಿಲ್ ಕದನ, ಭಾರತೀಯ ರಕ್ಷಣಾ ಪಡೆಗಳ ಸರ್ವಶ್ರೇಷ್ಟ ಹೋರಾಟದ ಐತಿಹಾಸಿಕ ಮೈಲಿಗಲ್ಲು ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ಏರ್‍ಮಾರ್ಷಲ್ ನಂದಾ ಕಾರ್ಯಪ್ಪ ಬಣ್ಣಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ “ಸನ್ನಿಸೈಡ್ ವಾರ್ ಮೆಮೋರಿಯಲ್”ನಲ್ಲಿ “ಕಾರ್ಗಿಲ್ ವಿಜಯ ದಿವಸ” ವನ್ನು ಗೌರವ ಪೂರ್ಣವಾಗಿ ಆಚರಿಸಲಾಯಿತು.
20 ವರ್ಷಗಳ ಹಿಂದೆ ನಡೆದ ಯುದ್ದದಲ್ಲಿ ಭಾರತೀಯ ರಕ್ಷಣಾ ಪಡೆಗಳ ಹಲವಾರು ಅಪ್ರತಿಮ ಸೇನಾಧಿಕಾರಿಗಳು ಮತ್ತು ಯೋಧರು ಅತ್ಯುನ್ನತ ರೀತಿಯಲ್ಲಿ ಹೋರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಸಮರ್ಪಿಸಿದ್ದಾರೆ ಎಂದು ನಂದಾ ಕಾರ್ಯಪ್ಪ ಅವರು ಹುತಾತ್ಮರನ್ನು ಸ್ಮರಿಸಿದರು.
ಸನ್ನಿಸೈಡ್ ವಾರ್ ಮೆಮೋರಿಯಲ್‍ನ “ಅಮರ್ ಜವಾನ್” ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಗಿಲ್ ಕದನದ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.
ಬಳಿಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಲೆಫ್ಟಿನೆಂಟ್ ಕರ್ನಲ್ ಚಂಗಪ್ಪ, ಮೇಜರ್ ಬಿದ್ದಂಡ ನಂದಾ ನಂಜಪ್ಪ, ಕೊಕ್ಕಲೆರ ಕಾರ್ಯಪ್ಪ, ಉದ್ಯಮಿ ಅರುಣ್, ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ ಹಾಗೂ ಸಾರ್ವಜನಿಕರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಕಾರ್ಗಿಲ್ ಯುದ್ದದಲ್ಲಿ ನೂರಾರು ಸೈನಿಕರು ಹೋರಾಡಿ ತಮ್ಮ ಪ್ರಾಣಾರ್ಪಣೆ ಮಾಡಿದ್ದು, ದೇಶ ಅವರ ತ್ಯಾಗವನ್ನು ಸದಾ ಸ್ಮರಿಸುತ್ತದೆ ಎಂದು ಹೇಳಿದರು.
ಹುತಾತ್ಮ ಯೋಧರೊಂದಿಗೆ ಅವರ ವಿಧವಾ ಪತ್ನಿಯರು ಮತ್ತು ಮಕ್ಕಳನ್ನು ಕೂಡ ಅತ್ಯಾವಶ್ಯವಾಗಿ ಸ್ಮರಿಸಬೇಕಿದೆ. ಅಮರ್ ಜವಾನ್ ಯುದ್ದ ಸ್ಮಾರಕ ಅವರ ತ್ಯಾಗ ಮತ್ತು ಬಲಿದಾನದ ಪ್ರತಿರೂಪವಾಗಿದ್ದು, ಇದಕ್ಕಾಗಿಯೇ ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ರಾಜ್ಯ ಸರಕಾರಗಳು ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬಗಳಿಗೆ ಅಗತ್ಯ ನೆರವು ಕಲ್ಪಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.