ಕೂಡಿಗೆ ಸೈನಿಕ ಶಾಲೆಯಲ್ಲಿ ಯೋಧರ ಬಲಿದಾನದ ಗುಣಗಾನ

26/07/2020

ಮಡಿಕೇರಿ ಜು.26 : ಜಿಲ್ಲೆಯ ಕೂಡಿಗೆ ಸೈನಿಕ ಶಾಲೆಯಲ್ಲಿ 21ನೇ ಕಾರ್ಗಿಲ್ ವಿಜಯ ದಿನೋತ್ಸವವನ್ನು ಆಚರಿಸಲಾಯಿತು.
ಕಾರ್ಗಿಲ್‍ನಲ್ಲಿ ನಮ್ಮ ವೀರ ಯೋಧರ ಬಲಿದಾನವನ್ನು ಸ್ಮರಿಸುವ ನಿಟ್ಟಿನಲ್ಲಿ ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್, ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಶಾಲೆಯ ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆರ್.ಕೆ ಡೇ, ಶಾಲೆಯ ಜೆಡಿ ಎನ್ ಸಿ ಸಿ ಕೋಯ್ ಘಟಕದ ಸಹಾಯಕ ಎನ್ ಸಿ ಸಿ ಅಧಿಕಾರಿಗಳು ಹಾಜರಿದ್ದು ವೀರ ಯೋಧರ ಬಲಿದಾನವನ್ನು ಸ್ಮರಿಸುತ್ತಾ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಮರ್ಪಿಸಿದರು.
ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ವಿಡಿಯೋ ದೃಶ್ಯಾವಳಿಯ ಮೂಲಕ ಮಾತನಾಡಿದ ಶಾಲೆಯ ಪ್ರಾಂಶುಪಾಲರು, ಕಾರ್ಯಕ್ರಮದ ಕುರಿತು ಎಲ್ಲಾ ವಿದ್ಯಾರ್ಥಿಗಳಿಗೆ ಸಂದೇಶ ರವಾನಿಸಿದರು. ಹಾಗೆಯೇ ಶಾಲೆಯು ಕೇಂದ್ರ ರಕ್ಷಣಾ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಕೇವಲ ರಕ್ಷಣಾ ಇಲಾಖೆಯಲ್ಲಿ ಭಾವಿ ನಾಯಕರನ್ನಾಗಿ ರೂಪಿಸುವ ತರಬೇತಿಯನ್ನಲ್ಲದೆ, ಅವರು ತಮ್ಮ ಭವಿಷ್ಯದ ಜೀವನದಲ್ಲಿ ಯಶಸ್ಸನ್ನು ಗಳಿಸಲು ಬೇಕಾದ ತರಬೇತಿಯನ್ನೂ ಸಹ ನೀಡಲಾಗುತ್ತಿದೆ ಎಂದರು.
::: ಕಿರುನಾಟಕ ಪ್ರದರ್ಶನ :::
ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಡೆಟ್ ಅಮೋಘ್ ಮತ್ತು ತಂಡದವರಿಂದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕøತರಾದ ‘ಕ್ಯಾಪ್ಟನ್ ವಿಕ್ರಮ್ ಭಾತ್ರಾ’ರವರ ಬಲಿದಾನದ ಸ್ಮರಣೆಯನ್ನೊಳಗೊಂಡ ‘ಎ ದಿಲ್ ಮಾಂಗೇ ಮೋರ್’ ಎಂಬ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.
ವಿವಿಧ ಸ್ಪರ್ಧೆ: ಇದರೊಂದಿಗೆ ಶಾಲೆಯ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಹಾಗೂ 21ನೇ ಕಾರ್ಗಿಲ್ ವಿಜಯ್ ದಿನೋತ್ಸವದ ಸ್ಮರಣಾರ್ಥವಾಗಿ ಮತ್ತು ಶಾಲೆಯ ವಿದ್ಯಾರ್ಥಿಗಳಲ್ಲಿ ಕಾರ್ಗಿಲ್ ಯುದ್ಧವನ್ನು ಕುರಿತಂತೆ ಇರುವ ಜ್ಞಾನವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಈ ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಇದಕ್ಕೂ ಮೊದಲು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗಿತ್ತು. ಈ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಚಿತ್ರಪಟಗಳನ್ನು ಕಾರ್ಗಿಲ್ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧರಿಗೆ ಕಳುಹಿಸಲಾಗುವುದು. ಹಾಗೆಯೇ ಈ ವರ್ಷದ ಸಿ ಬಿ ಎಸ್ ಸಿಯ 10 ಮತ್ತು 12 ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯು ಉತ್ತಮ ಫಲಿತಾಂಶವನ್ನು ಗಳಿಸಲು ಕಾರಣಕರ್ತರಾದ ಶಿಕ್ಷಕರಿಗೆ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಜೊತೆಗೆ ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಇ-ಪ್ರಮಾಣ ಪತ್ರಗಳನ್ನೂ ಕಳುಹಿಸಿಕೊಡಲಾಯಿತು.