ರಾಜ್ಯದಲ್ಲಿ ಉಗ್ರರ ಚಟುವಟಿಕೆಗೆ ಕಡಿವಾಣ

27/07/2020

ಬೆಂಗಳೂರು ಜು.27 : ಐಸಿಸ್ ಸೇರಿ ಇತರೆ ಸಂಘಟನೆಗಳ ಉಗ್ರರ ಚಟುವಟಿಕೆಗಳನ್ನು ಕಟ್ಟಿ ಹಾಕಲು ನಾವೂ ಪಣತೊಟ್ಟಿದ್ದೇವೆ. ಹೀಗಾಗಿ ರಾಷ್ಟ್ರೀಯ ತನಿಖಾ ದಳ ಎನ್‍ಐಎದೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಚು ನಡೆಯುತ್ತಿದೆ ಎಂಬ ವಿಶ್ವಸಂಸ್ಥೆ ವರದಿಗೆ ನಗರದಲ್ಲಿ ರವಿವಾರ ಪ್ರತಿಕ್ರಿಯಿಸಿದ ಅವರು, ಕೇರಳ ಹಾಗೂ ಕರ್ನಾಟಕದಲ್ಲಿ ಉಗ್ರರ ಕೃತ್ಯ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ನಾವು ಎನ್‍ಐಎಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಈಗಾಗಲೇ ಬೆಂಗಳೂರು ಹಾಗೂ ಉಡುಪಿಯಲ್ಲಿ ಎರಡು ಮಾಡೆಲ್ ಗಳಿಗೆ ಇತ್ಯರ್ಥ ಮಾಡಲಾಗಿದೆ. ನಿರಂತರವಾಗಿ ಉಗ್ರರ ಚಟುವಟಿಕೆ ತಡೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕರ್ನಾಟಕ ಪೊಲೀಸರು ತೆಗೆದುಕೊಂಡಿದೆ ಎಂದು ಹೇಳಿದರು.
ಅಂತೆಯೇ ಕೇವಲ ಎನ್‍ಐಎ ಮಾತ್ರವಲ್ಲದೇ, ಕೇರಳ, ತಮಿಳುನಾಡು, ತೆಲಂಗಾಣ ಪೊಲೀಸರ ಜೊತೆಯ ಸಂಪರ್ಕದಲ್ಲಿದ್ದೇವೆ. ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಕಾರ್ಯಾಚರಣೆ ಮೇಲೆಯೇ ವಿಶ್ವಸಂಸ್ಥೆ ವರದಿ ನೀಡಿದೆ. ರಾಜ್ಯದಲ್ಲಿ ಯಾವುದೇ ಉಗ್ರ ಚಟುವಟಿಕೆಗೆ ಅವಕಾಶ ಕೊಟ್ಟಿಲ್ಲ. ಮುಂದೆಯೂ ಕೊಡುವುದಿಲ್ಲ’ ಎಂದೂ ಅವರು ಹೇಳಿದರು.