ಉಗ್ರರನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ

27/07/2020

ವಿಶ್ವಸಂಸ್ಥೆ ಜು.27 : ಪಾಕಿಸ್ತಾನಿಯರ ನೇತೃತ್ವದಲ್ಲಿ ಕುಕೃತ್ಯಗಳನ್ನು ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಈವರೆಗೆ ಕಪ್ಪು ಪಟ್ಟಿಗೆ ಸೇರಿಸಿಲ್ಲ ಎಂದು ವಿಶ್ವಸಂಸ್ಥೆ (ಯುಎನ್) ವರದಿಯೊಂದರಲ್ಲಿ ತಿಳಿಸಲಾಗಿದೆ.
ಭಾರತ ಉಪಖಂಡದಲ್ಲಿ, ಅಲ್ ಖೈದಾ, ಇರಾಕ್‍ನ ಇಸ್ಲಾಮಿಕ್ ಸ್ಟೇಟ್ ಮತ್ತು ಲೆವಂತ್-ಖೋರಾಸನ್, ಮತ್ತು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಗಳನ್ನು ಪಾಕಿಸ್ತಾನಿ ರಾಷ್ಟ್ರೀಯರು ಮುನ್ನಡೆಸುತ್ತಿದ್ದಾರೆ. ಈವರೆಗೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ ಎಂದು ಭಯೋತ್ಪಾದಕ ಸಂಘಟನೆಗಳ ಕುರಿತ ಸಮಿತಿ ತನ್ನ 26ನೇ ವರದಿಯಲ್ಲಿ ಹೇಳಿದೆ.
ಅಫ್ಘಾನಿಸ್ತಾನದ ವಿಶೇಷ ಪಡೆಗಳು ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ದೇಶಾದ್ಯಂತ ದಾಳಿ ನಡೆಸಿದ್ದು, ಈ ದಾಳಿಗಳಲ್ಲಿ ಐಸಿಲ್-ಕೆ ಮುಖ್ಯಸ್ಥ ಅಸ್ಲಂ ಫಾರೂಕಿ ಅಲಿಯಾಸ್ ಅಬ್ದುಲ್ಲಾ ಒರೊಕಜೈ, ಜಿಯಾ-ಉಲ್-ಹಕ್ ಅಲಿಯಾಸ್ ಅಬು ಒಮರ್ ಖೋರಸಾನಿ ಹಾಗೂ ಇತರರನ್ನು ಬಂಧಿಸಿವೆ ಎಂದು ವರದಿ ಹೇಳಿದೆ. ಫಾರೂಕಿ ಪಾಕಿಸ್ತಾನದ ಖೈಬರ್ ಪಷ್ತೂನ್ ಮೂಲದವನು, ಮಾರ್ಚ್ ನಲ್ಲಿ ಕಾಬೂಲ್ ನ ಪ್ರಮುಖ ಗುರುದ್ವಾರದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸೂತ್ರ ದಾರಿ ಎಂದು ಹೇಳಲಾಗುತ್ತದೆ. ದಾಳಿಯಲ್ಲಿ 25 ಸಿಖ್ಖರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ ಖೈದಾ ದಿಗ್ಬಂಧನ ಸಮಿತಿ ಫಾರೂಕಿಯನ್ನು ಈವರೆಗೆ ಕಪ್ಪುಪಟ್ಟಿಗೆ ಸೇರಿಸಿಲ್ಲ ಎಂದು ಹೇಳಿದೆ.