ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 354ಕ್ಕೆ ಏರಿಕೆ

27/07/2020

ಮಡಿಕೇರಿ ಜು. 27 : ಕೊಡಗು ಜಿಲ್ಲೆಯಲ್ಲಿ ಭಾನುವಾರ ನಾಲ್ಕು ಮಂದಿ ಕೊರೋನಾ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸೋಮವಾರ ಮತ್ತೆ
ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಶೇ.71ರಷ್ಟು ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸೋಮವಾರ ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆಯ 20 ವರ್ಷದ ಪುರುಷ, ಬ್ಯಾಡಗೊಟ್ಟದ ಜ್ವರ ಲಕ್ಷಣವಿದ್ದ 31 ವರ್ಷದ ಮಹಿಳೆ, ಬೀಟಿಕಟ್ಟೆಯ ಜ್ವರ ಲಕ್ಷಣವಿದ್ದ 38 ವರ್ಷದ ಪುರುಷ, ಶನಿವಾರಸಂತೆಯ ಕಾವೇರಿ ಕಾಲೇಜು ರಸ್ತೆಯ 12 ವರ್ಷದ ಬಾಲಕಿ, ಕುಶಾಲನಗರ ಹುಲುಸೆ ಗ್ರಾಮದ 75 ವರ್ಷದ ಮಹಿಳೆ, ಗೋಣಿಕೊಪ್ಪ ಆರೋಗ್ಯ ಇಲಾಖೆ ವಸತಿ ಗೃಹದ 41 ವರ್ಷದ 41 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಶೇ.80ರಷ್ಟು ಮಂದಿಯಲ್ಲಿ ಕೊರೋನಾ ಸೋಂಕಿನ ಲಕ್ಷಣಗಳೇ ಗೋಚರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರ್ಯಾಂಡಮ್ ತಪಾಸಣೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು,ಇತರೆ ದೇಶ ಹಾಗೂ ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. ಅದರಂತೆ ಇತರ ದೇಶದ 8,ಇತರ ರಾಜ್ಯದ 579 ಹಾಗೂ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 2132 ಮಂದಿಯನ್ನು ಸಂಪರ್ಕ ತಡೆಯಲ್ಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈಲ್ಲೆಯಲ್ಲಿ ಈ ವರೆಗೆ 14,142 ಮಂದಿಯ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 354 ಮಂದಿಯಲ್ಲಿ ಪಾಸಿಟಿವ್ ಬಂದಿದ್ದರೆ, ಅವರ ಪೈಕಿ 249 ಮಂದಿ ಗುಣಮುಖರಾಗಿದ್ದಾರೆ. ಆರು ಮಂದಿ ಸಾವಿಗೀಡಾಗಿದ್ದು, 13,788ಮಂದಿಯಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಅವರು ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ ಬ್ಯಾಡಗೊಟ್ಟ ಹಾಗೂ ಬೀಟಿಕಟ್ಟೆ ಗ್ರಾಮಗಳಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಅರುವತ್ತೊಕ್ಲುವಿನ ಮೈಸೂರಮ್ಮ ಬಡಾವಣೆ, ಚೆಟ್ಟಳ್ಳಿಯ ಕಂಡಕೆರೆ, ಮೂರ್ನಾಡು ಆರೋಗ್ಯ ವಸತಿ ಗೃಹ ಪ್ರದೇಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ 99 ನಿಯಂತ್ರಿತ ಪ್ರದೇಶಗಳಿರುವುದಾಗಿ ಅವರು ಹೇಳಿದ್ದಾರೆ.