ಬಕ್ರೀದ್ ಹಬ್ಬ : ಮಾರ್ಗಸೂಚಿ ಪಾಲಿಸಲು ಕೊಡಗು ವಕ್ಫ್ ಸಮಿತಿ ಮನವಿ

27/07/2020

ಮಡಿಕೇರಿ ಜು.27 : ರಾಜ್ಯಾದ್ಯಂತ ಆ.1 ರಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ರಾಜ್ಯದ ಹಿಲಾಲ್ ಸಮಿತಿ ಘೋಷಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಜು.31 ರಂದು ಹಬ್ಬ ನಡೆಯಲಿದೆ ಎಂದು ಸಮಿತಿ ತಿಳಿಸಿದೆ. ಎರಡೂ ದಿನಗಳಂದು ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಿ ಸರ್ಕಾರ ಆದೇಶಿಸಿದ್ದು, ಮುಸಲ್ಮಾನ ಬಾಂಧವರು ಮಾರ್ಗಸೂಚಿಯನ್ನು ಪಾಲಿಸಿ ಸಹಕರಿಸಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್ ಅವರು ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಕ್ರೀದ್ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವುದರೊಂದಿಗೆ ಕೊರೋನಾ ಸೋಂಕಿನಿಂದ ವಿಶ್ವ ಮುಕ್ತವಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಕೋರಿದ್ದಾರೆ.
ಮಸೀದಿಗಳಲ್ಲಿ ಒಂದು ಬಾರಿಗೆ 50 ಜನರು ಮಾತ್ರ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಧಿಕ ಜನರು ಬಂದಲ್ಲಿ ಎರಡು ಅಥವಾ ಮೂರು ಬ್ಯಾಚ್‍ಗಳಲ್ಲಿ ಪ್ರಾರ್ಥನೆ ಮಾಡಲು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಹಾಗೂ ವಕ್ಫ್ ಇಲಾಖೆ ಸೂಚಿಸಿದೆ.
ಯಾವುದೇ ಮಸೀದಿಯ ಆಡಳಿತ ಮಂಡಳಿಯು ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರದ ಜುಮಾ ಪ್ರಾರ್ಥನೆ ಸಹಿತ ದಿನದ 5 ಹೊತ್ತಿನ ಸಾಮೂಹಿಕ ಪ್ರಾರ್ಥನೆಯನ್ನು ಈಗಾಗಲೇ ನಿರ್ಬಂಧಿಸಿದ್ದಲ್ಲಿ ಅಂತಹ ಮಸೀದಿ ಆಡಳಿತ ಸಮಿತಿಗಳು ಅದನ್ನು ಬಕ್ರೀದ್ ನಮಾಜ್‍ನಲ್ಲೂ ಮುಂದುವರೆಸಲು ಸೂಚಿಸಲಾಗಿದೆ. ಮಸೀದಿಗಳನ್ನು ಹೊರತು ಪಡಿಸಿ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಮಾಡುವಂತಿಲ್ಲ ಎಂದು ನಿರ್ಬಂಧಿಸಲಾಗಿದ್ದು, ಮುಸಲ್ಮಾನ ಬಾಂಧವರು ಈ ನಿಯಮವನ್ನು ಪಾಲಿಸಬೇಕೆಂದು ಯಾಕುಬ್ ಹೇಳಿದ್ದಾರೆ.
::: ಸಾಮೂಹಿಕ ಪ್ರಾರ್ಥನೆಯ ಮಾರ್ಗಸೂಚಿ :::
ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಮೊದಲು ಆಡಳಿತ ಮಂಡಳಿಗಳು ಈ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ. ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‍ಗಳನ್ನು ಹಾಕಿರಬೇಕು. 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ನಮಾಜ್ ನಿರ್ವಹಿಸುವವರ ಮಧ್ಯೆ ಕನಿಷ್ಠ 6 ಅಡಿಗಳ ಅಂತರ ಕಾಯ್ದುಕೊಳ್ಳಬೇಕು. ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡಬೇಕು. ಕೈಗಳನ್ನು ಸೋಪ್ ಅಥವಾ ಸ್ಯಾನಿಟೈಸರ್‍ನಿಂದ ಶುಚಿಗೊಳಿಸಿಕೊಳ್ಳಬೇಕು. ಮಸೀದಿಗಳಲ್ಲಿರುವ ಧಾರ್ಮಿಕ ಗ್ರಂಥಗಳನ್ನು ಮುಟ್ಟುವಂತಿಲ್ಲ. ತಮ್ಮ ಮನೆಗಳಿಂದಲೇ ಕಡ್ಡಾಯವಾಗಿ ಮುಸಲ್ಲಾವನ್ನು (ಜಾಯನಮಾಜ್) ಕಡ್ಡಾಯವಾಗಿ ತರಬೇಕು. ಹಸ್ತಲಾಘವ ಅಥವಾ ಆಲಿಂಗನ ಮಾಡಿಕೊಳ್ಳದಂತೆ ಸೂಚಿಸಬೇಕು. ಅಪರಿಚಿತರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದರೆ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿರುವ ಯಾಕುಬ್ ಅವರು ಜಿಲ್ಲೆಯ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.