ದಾಳಿಂಬೆ ಹಣ್ಣಿನಲ್ಲಿರುವ ಅದ್ಭುತ ಪ್ರಯೋಜನಗಳು

27/07/2020

ಪ್ರತಿ ಹಣ್ಣು ಮತ್ತು ತರಕಾರಿಯಲ್ಲಿ ವಿಭಿನ್ನ ಅಂಶಗಳಿದ್ದು ಆರೋಗ್ಯವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕೆಲವರಿಗೆ ಕೆಲವು ಹಣ್ಣುಗಳ ರೂಪ ಇಷ್ಟವಾಗದಿದ್ದರೆ ಆ ಹಣ್ಣನ್ನು ತಿನ್ನಲು ಇಷ್ಟಪಡುವುದಿಲ್ಲ. ಉದಾಹರಣೆಗೆ ಹಲಸಿನ ಹಣ್ಣು. ಕೆಲವರು ಅದರ ಮುಳ್ಳುಮುಳ್ಳಾದ ಹೊರಭಾಗ ಕಂಡು ತೊಳೆಗಳನ್ನು ತಿನ್ನಲು ಮುಂದೆ ಬರುವುದಿಲ್ಲ. ಅಂತೆಯೇ ದಾಳಿಂಬೆ ಹಣ್ಣಿನ ಬೀಜಗಳನ್ನು ಒಂದೊಂದಾಗಿ ಜಾಗರೂಕತೆಯಿಂದ ಬಿಡಿಸಿ ತಿನ್ನುವುದೂ ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ ಈ ಹಣ್ಣಿನ ಗುಣಗಳನ್ನು ಮನಗಂಡ ಬಳಿಕ ದಾಳಿಂಬೆ ತಿನ್ನುವ ಬಯಕೆಯಿಂದ ದೂರವಿರುವುದು ಮಾತ್ರ ಅತಿಕಷ್ಟ.

ದಾಳಿಂಬೆಯಲ್ಲಿದೆ ಕಬ್ಬಿಣದ ಅಂಶ :

ದೇಹದಲ್ಲಿ ಹೆಚ್ಚಿನ ಶಕ್ತಿ ತುಂಬಲು ರಕ್ತದಲ್ಲಿ ಕಬ್ಬಿಣದ ಅಂಶ ಇರುವುದು ಅಗತ್ಯ. ಹಾಗಾಗಿ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ಬಸಲೆ ಅಥವಾ ಪಾಲಕ್ ಸೊಪ್ಪಿನ ಅಡುಗೆಗಳನ್ನು ತಿನ್ನಲು ವೈದ್ಯರು ಸಲಹೆ ಮಾಡುತ್ತಾರೆ. ಆದರೆ ಇದರಲ್ಲಿರುವ ಕಬ್ಬಿಣದ ಅಂಶ ತುಂಬಾ ಹೆಚ್ಚಿರುವುದರಿಂದ (2.7 ಮಿ.ಗ್ರಾಂ/100ಗ್ರಾಂ) ವೈದ್ಯರು ಸೂಕ್ತ ಪ್ರಮಾಣದಲ್ಲಿರುವ (0.3 ಮಿ.ಗ್ರಾಂ/ಗ್ರಾಂ) ದಾಳಿಂಬೆ ಹಣ್ಣನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ. ಸೊಪ್ಪನ್ನು ನೇರವಾಗಿ ಸೇವಿಸಲು ಸಾಧ್ಯವಿಲ್ಲ. ಬೇಯಿಸಿದ ಬಳಿಕ ಹಲವು ಪೌಷ್ಟಿಕಾಂಶಗಳು ನಷ್ಟವಾಗುವ ಕಾರಣ ನೇರವಾಗಿ ತಿನ್ನಬಹುದಾದ ದಾಳಿಂಬೆ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಆಯ್ಕೆಯಾಗಿದೆ.

ಸುಲಭಗೊಳ್ಳುವ ವಿಸರ್ಜನೆ :

ದಾಳಿಂಬೆ ಹಣ್ಣಿನಲ್ಲಿ ಸುಲಭವಾಗಿ ಕರಗದ ನಾರಿನಂಶವಿರುವ ಕಾರಣ ಕರುಳಿನಲ್ಲಿ ಪಚನಕ್ರಿಯೆಯ ನಂತರ ತ್ಯಾಜ್ಯಗಳೊಂದಿಗೆ ಸುಲಭವಾಗಿ ಮಿಳಿತಗೊಂಡು ಸುಖವಿಸರ್ಜನೆಗೆ ಸಹಾಯ ಮಾಡುತ್ತದೆ. ಈ ನಾರು ದಾಳಿಂಬೆ ಕಾಳಿನ ಒಳಗಿನ ಬೀಜದಲ್ಲಿ ಶೇಖರವಾಗಿದ್ದು ಪ್ರತಿದಿನದ ಬಹಿರ್ದೆಶೆಗೆ ನೆರವಾಗುತ್ತದೆ.

ನರಗಳ ಒಳಗೆ ಶೇಖರವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL-low density lipids) ಶೇಖರಣೆ ಹೆಚ್ಚುತ್ತಿದ್ದಂತೆ ನರಗಳು ತಿರುವಿದೆಡೆಯಲ್ಲಿ, ಕವಲಿನ ನಡುವಣ ಭಾಗದಲ್ಲಿ ಶೇಖರಗೊಂಡು ರಕ್ತದ ಮೂಲಕ ಬಳಿಕ ಆಗಮನವಾಗುವ ಕೊಲೆಸ್ಟ್ರಾಲ್ ಅನ್ನು ಅಂಟಿಸಿಕೊಂಡು ನರಗಳ ಒಳಭಾಗವನ್ನು ಒತ್ತುತ್ತಾ ಬರುತ್ತದೆ. ಪರಿಣಾಮವಾಗಿ ಹೃದಯಕ್ಕೆ ಈ ಭಾಗದಿಂದ ರಕ್ತವನ್ನು ಸರಬರಾಜು ಮಾಡಲು ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ನೈಸರ್ಗಿಕವಾಗಿ ಸಿಗುವ ಆಂಟಿ ಆಕ್ಸಿಡೆಂಟುಗಳು ಈ ಗಂಟುಗಳನ್ನು ಕರಗಿಸಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಅಲ್ಲಿಂದ ತೊಲಗಿಸಲು ಸಹಾಯ ಮಾಡುತ್ತದೆ. ಹಸಿರು ಚಹಾದಲ್ಲಿ (ಗ್ರೀನ್ ಟೀ) ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದರೂ ದಾಳಿಂಬೆಯಲ್ಲಿ ಇನ್ನೂ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿವೆ. ತಾಜಾ ದಾಳಿಂಬೆ ಹಣ್ಣುಗಳನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ದೂರವಾಗಿ ಆರೋಗ್ಯ ವೃದ್ಧಿಸುತ್ತದೆ.

ವೃದ್ಧಾಪ್ಯವನ್ನು ದೂರವಿಡುತ್ತದೆ : ದಾಳಿಂಬೆಯಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಶಾರೀರಿಕ ಆರೋಗ್ಯದ ಜೊತೆಗೆ ಚರ್ಮದ ಕಾಂತಿಯನ್ನೂ ಹೆಚ್ಚಿಸುವ ಕಾರಣ ವೃದ್ಧಾಪ್ಯದ ಚಿಹ್ನೆಗಳು ಬೇಗನೇ ಆವರಿಸದು. ನಮ್ಮ ಚರ್ಮ ಕೊಲಾಜೆನ್ ಮತ್ತು ಎಲಾಸ್ಟಿಕ್ ನಾರುಗಳಿಂದ ಮಾಡಲ್ಪಟ್ಟಿದೆ (collagen and elastic fibres). ಈ ಕೊಲಾಜೆನ್ ಸುಸ್ಥಿತಿಯಲ್ಲಿಡಲು ವಿಟಮಿನ್ ಸಿ ಅಗತ್ಯ. ದಾಳಿಂಬೆಯಲ್ಲಿ ಸಮಪ್ರಮಾಣದಲ್ಲಿರುವ ವಿಟಮಿನ್ ಸಿ ಚರ್ಮದ ಆರೈಕೆ ಮತ್ತು ರಕ್ಷಣೆಗೆ ಕಾರಣವಾಗಿದೆ.

ಉತ್ತಮಗೊಳ್ಳುವ ರೋಗನಿರೋಧಕ ಶಕ್ತಿ : ವಿಟಮಿನ್ ಸಿ ನ ಇನ್ನೊಂದು ಉಪಯೋಗವೆಂದರೆ ರೋಗ ನಿರೋಧಕ ಶಕ್ತಿಯನ್ನು ಉತ್ತಮಪಡಿಸುವುದು. ಮಳೆಗಾಲದಲ್ಲಿ ಗಾಳಿ, ನೀರಿನ ಮೂಲಕ ದೇಹಕ್ಕೆ ಧಾಳಿಯಿಡುವ ಹಲವು ಕ್ರಿಮಿಗಳನ್ನು ಎದುರಿಸಲು ದೇಹವನ್ನು ಸದೃಢಗೊಳಿಸಲು ದಾಳಿಂಬೆಯಲ್ಲಿ ಹೇರಳವಾಗಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ.

ಪಿತ್ತಜನಕಾಂಗದ ಬೆಳವಣಿಗೆಗೆ ಸಹಾಯ : ನಮ್ಮ ದೇಹದಲ್ಲಿನ ಅಂಗಗಳಲ್ಲಿ ಒಂದು ಭಾಗ ದಾನ ಮಾಡಿದ ಬಳಿಕ ಮತ್ತೆ ಬೆಳೆಯುವ ಅಂಗವೆಂದರೆ ಪಿತ್ತಜನಕಾಂಗ ಮಾತ್ರ. ಈ ಬೆಳವಣಿಗೆಗೆglutathione ಎಂಬ ಕಿಣ್ವ ಅಗತ್ಯ. ದಾಳಿಂಬೆಯಲ್ಲಿರುವ ellagic acid ಎಂಬ ಅಂಶ glutathione ಕಿಣ್ವವನ್ನು ಹೆಚ್ಚು ಹೆಚ್ಚಾಗಿ ದೇಹ ಉತ್ಪಾದಿಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಪಿತ್ತಜನಕಾಂಗ ಶೀಘ್ರವೇ ತನ್ನ ಮೂಲಸ್ವರೂಪ ಪಡೆಯುತ್ತದೆ. ಹೆಚ್ಚಾಗಿ ಮದ್ಯಪಾನಿಗಳಲ್ಲಿ ಪಿತ್ತಜನಕಾಂಗ ಬಾಧೆಗೊಳಗಾಗಿದ್ದು ದಾಳಿಂಬೆಯ ಸೇವನೆ ಪರಿಣಾಮಕಾರಿಯಾಗಿದೆ.

ಕ್ಯಾನ್ಸರ್ ತಡೆಗಟ್ಟುವುದು : ದಾಳಿಂಬೆಯಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳು ಹೇರಳವಾಗಿರುವುದರಿಂದ ದೇಹ ಕ್ಯಾನ್ಸರ್ ರೋಗವನ್ನು ಎದುರಿಸಲು ಹೆಚ್ಚು ಶಕ್ತಿ ಪಡೆಯುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅಥವಾ ಕ್ಯಾನ್ಸರ್ ಲಕ್ಷಣಗಳು ಗೋಚರಿಸುತ್ತಿದ್ದರೆ ದಾಳಿಂಬೆಯ ನಿಯಮಿತ ಸೇವನೆ ಕ್ಯಾನ್ಸರ್ ನ ಆಗಮನವನ್ನು ದೂರವಿಡುತ್ತದೆ.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ: ದಾಳಿಂಬೆಯಲ್ಲಿರುವ polyphenols, anthocyanins ಮತ್ತು tannins ಎಂಬ ಕಿಣ್ವಗಳು ಮೂತ್ರಪಿಂಡಗಳ ಕೆಲಸಕ್ಕೆ ನೆರವಾಗುತ್ತವೆ. ಪರಿಣಾಮವಾಗಿ ರಕ್ತ ಪರಿಶುದ್ಧಗೊಂಡು ದೇಹದ ವಿಷಕಾರಕ ವಸ್ತುಗಳು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ.

ಅಲರ್ಜಿಗೆ ನೈಸರ್ಗಿಕ ಪ್ರತಿರೋಧಿಯಾಗಿದೆ : ಹಲವರಿಗೆ ಕೆಲವು ವಸ್ತುಗಳಿಂದ ಅಲರ್ಜಿಯುಂಟಾಗುತ್ತದೆ. ಹೂವಿನ ಪರಾಗ, ಕೀಟಗಳ ಕಚ್ಚುವಿಕೆ, ಕೆಲವು ಗಿಡಗ ಮುಳ್ಳುಗಳು, ಎಲೆ ತುಂಡಾದರೆ ಒಸರುವ ಹಾಲಿನಂತಹ ದ್ರವ ಮೊದಲಾದವು ಅಲರ್ಜಿ ಉಂಟುಮಾಡುತ್ತವೆ. ಈ ಅಲರ್ಜಿಗಳನ್ನು ಎದುರಿಸಲು ದೇಹ ಅದಕ್ಕೆ ಕಾರಣವಾದ ಅಲರ್ಜಿಕಾರಕ ವಸ್ತುವಿಗೆ ಪ್ರತಿರೋಧಿಯನ್ನು ಸೃಷ್ಟಿಸಿಕೊಳ್ಳಬೇಕು. ದಾಳಿಂಬೆಯಲ್ಲಿರುವ ಠಿoಟಥಿಠಿheಟಿoಟ ಎಂಬ ಕಿಣ್ವ ಈ ಪ್ರತಿರೋಧಿಯನ್ನು ಸೃಷ್ಟಿಸಲು ನೆರವಾಗುತ್ತದೆ. ಪರಿಣಾಮವಾಗಿ ದೇಹ ಅಲರ್ಜಿಯಿಂದ ಶೀಘ್ರ ಹೊರಬರುತ್ತದೆ.

ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ : ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ದಿನವೂ 8 ಔನ್ಸ್ ತಾಜಾ ದಾಳಿಂಬೆ ರಸವನ್ನು ಕುಡಿದರೆ ಕಲಿಯುವಿಕೆ ಮತ್ತು ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದು ಹೇಳುತ್ತಾರೆ.

ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ : ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ದಾಳಿಂಬೆಯನ್ನು ಸಕ್ಕರೆ ಕಾಯಿಲೆಗೆ ಪರಿಹಾರವಾಗಿ ಬಳಸಲಾಗುತ್ತದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದಾಳಿಂಬೆ ರಸವು ದೇಹದ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ : ಇದು ನೋವನ್ನು ಕಡಿಮೆ ಮಾಡಲು ಮತ್ತು ದೇಹಕ್ಕೆ ಚೈತನ್ಯವನ್ನು ಒದಗಿಸಲು ಸಹಾಯ ಮಾಡುತ್ತದೆ. ವ್ಯಾಯಾಮದಿಂದ ಉಂಟಾಗುವ ಉತ್ಕರ್ಷಣಾ ಹಾನಿಯನ್ನು ಕಡಿಮೆ ಮಾಡುತ್ತದೆ.