ಕರಿಕೆ ಸಂಕಷ್ಟ : ಉಸ್ತುವಾರಿ ಸಚಿವರ ಗಮನ ಸೆಳೆದ ಗ್ರಾಮಸ್ಥರು

July 27, 2020

ಮಡಿಕೇರಿ ಜು.27 : ಕರಿಕೆ ಗ್ರಾಮದಲ್ಲಿ ಕೊರೋನಾ ಹಿನ್ನೆಲೆ ಮಣ್ಣಿನಿಂದ ಮುಚ್ಚಲಾಗಿರುವ ಕೇರಳದ ಗಡಿ ರಸ್ತೆಯನ್ನು ಗ್ರಾಮಸ್ಥರ ಹಿತದೃಷ್ಟಿಯಿಂದ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಕರಿಕೆ ಗ್ರಾಮಸ್ಥರು ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೊಡಗಿನ ಗಡಿ ಗ್ರಾಮ ಕರಿಕೆ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮಕ್ಕೆ ಹೊಂದಿಕೊಂಡಿದೆ. ಸುಮಾರು ಐದು ಸಾವಿರ ಮಂದಿ ಇರುವ ಗ್ರಾಮದಲ್ಲಿ ಶೇ.70 ರಷ್ಟು ಕಡು ಬಡವರು, ಪರಿಶಿಷ್ಟರು, ಹಿಂದುಳಿದವರು ವಾಸವಾಗಿದ್ದಾರೆ. ಗ್ರಾಮಸ್ಥರು ದೈನಂದಿನ ಚಟುವಟಿಕೆಗಳಿಗೆ ಹಾಗೂ ತುರ್ತು ಚಿಕಿತ್ಸೆಗೆ ನೆರೆಯ ಕೇರಳದ ಪಾನತ್ತೂರು ಗ್ರಾಮವನ್ನೇ ಅವಲಂಬಿಸಿದ್ದಾರೆ.
ಆದರೆ ಕೊರೋನಾ ಹಿನ್ನೆಲೆ ಸಂಚಾರ ಸಂಪರ್ಕವನ್ನು ಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಅಗತ್ಯ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಅಲ್ಲದೆ, ಯಾವುದೇ ರೀತಿಯ ಪ್ರಾಥಮಿಕ ಚಿಕಿತ್ಸೆ, ಒಳರೋಗಿಗಳ ಚಿಕಿತ್ಸೆಗೆ ಯಾವುದೇ ಲ್ಯಾಬ್ ಸೌಲಭ್ಯಗಳಿಲ್ಲದೆ ಹಲವು ಸಮಸ್ಯೆಗೆ ಕಾರಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಜನರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಎಲ್ಲಾ ದಿನಸಿ ಪದಾರ್ಥಗಳು, ಆರೋಗ್ಯದ ಅಗತ್ಯಗಳಿಗೂ ಮತ್ತು ರೈತರು ಬೆಳೆದ ಅಡಿಕೆ, ತೆಂಗು, ರಬ್ಬರ್‍ಗಳ ಮಾರುಕಟ್ಟೆಗೂ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಅವಲಂಬಿಸಬೇಕಾಗಿದೆ. ರಸ್ತೆ ಸಂಚಾರ ತಡೆಯಿಂದಾಗಿ ರೈತರು ಮತ್ತು ಕೃಷಿ ಕೂಲಿಕಾರರು ಭಾರೀ ಕಷ್ಟ, ನಷ್ಟ್ಟಗಳನ್ನು ಅನುಭವಿಸುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೂ ಅಡಚಣೆಯಾಗಿದೆ ಎಂದು ಗ್ರಾಮಸ್ಥರು ಸಚಿವರ ಗಮನ ಸೆಳೆದರು.
::: ವಿಶೇಷ ತಂಡ ರಚಿಸಿ :::
ಕೊಡಗು- ಕೇರಳದ ಗಡಿ ರಸ್ತೆಯಲ್ಲಿ ಸಂಚರಿಸುವವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ಕ್ರಮ ಕೈಗೊಳ್ಳುವುದರೊಂದಿಗೆ ಗ್ರಾಮಸ್ಥರ ಆರೋಗ್ಯದ ಹಿತದೃಷ್ಟಿಯಿಂದ ಸಂಚಾರ ಸಂಪರ್ಕವನ್ನು ಮುಕ್ತಗೊಳಿಸಬೇಕು. ತಪಾಸಣೆಗಾಗಿ ವಿಶೇಷ ತಂಡವನ್ನು ರಚನೆ ಮಾಡಬೇಕು ಎಂದು ಮನವಿ ಮಾಡಿದರು.
ಕರಿಕೆ ಗ್ರಾ.ಪಂ ಮಾಜಿ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್, ಮಾಜಿ ಸದಸ್ಯ ಬಿ.ಎಸ್.ರಮಾನಾಥ್, ಬಿ.ಕೆ.ಪುರುಷೋತ್ತಮ, ಕರಿಕೆ ಸಹಕಾರ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಬಿ.ಡಿ.ದೇವರಾಜು, ನಿರ್ದೇಶಕ ಎಂ.ಎಂ.ರೆಲ್ಸನ್ ಮನವಿ ಪತ್ರ ನೀಡುವ ಸಂದರ್ಭ ಹಾಜರಿದ್ದರು.
ಗಡಿಯಲ್ಲಿ ಮದ್ಯದ ಅಂಗಡಿ ತೆರೆಯಲು ಸಮ್ಮತಿ ಸೂಚಿಸಿರುವ ಶಾಸಕರು ಗಡಿ ಭಾಗದ ಜನರ ಸಂಚಾರಕ್ಕೆ ಯಾಕೆ ಅವಕಾಶ ಕಲ್ಪಿಸುತ್ತಿಲ್ಲವೆಂದು ಇದೇ ಸಂದರ್ಭ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಮನವಿ ಅರಣ್ಯರೋಧನವಾಗಿದೆ ಎಂದು ವಿಷಾದಿಸಿದರು.

error: Content is protected !!