ಪ್ರವಾಸೋದ್ಯಮ ಸಾರ್ವಜನಿಕರಿಗೆ ಮುಕ್ತಗೊಳಿಸುವಲ್ಲಿ ಮತ್ತೊಮ್ಮೆ ಚರ್ಚಿಸಿ ಕ್ರಮವಹಿಸಿ : ಸಚಿವ ವಿ.ಸೋಮಣ್ಣ ಸಲಹೆ

July 27, 2020

ಮಡಿಕೇರಿ ಜು.27 : ಪ್ರಸ್ತುತ ದಿನದಲ್ಲಿ ಕೋವಿಡ್‍ನೊಂದಿಗೆ ಬದುಕಬೇಕಿರುವ ಹಿನ್ನೆಲೆ ಲಾಕ್‍ಡೌನ್ ಪ್ರಮೇಯ ಬರುವುದಿಲ್ಲ. ಆದ್ದರಿಂದ ಪ್ರವಾಸೋದ್ಯಮ ಕ್ಷೇತ್ರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಸಲಹೆ ಮಾಡಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಸರ್ಕಾರಕ್ಕೆ ವರುಷ-ಪರಿಹಾರದ ಸ್ಪರ್ಶ ಕಾರ್ಯಕ್ರಮದ ನಂತರ ಅಧಿಕಾರಿಗಳ ಜೊತೆ ಕೋವಿಡ್-19 ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನೇ ನಂಬಿಕೊಂಡು ಹಲವು ಕುಟುಂಬಗಳು ಬದುಕುತ್ತಿವೆ. ಆದ್ದರಿಂದ ಕೋವಿಡ್-19 ನಿಯಂತ್ರಿಸಲು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹೀಗೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಬಳಸಿಕೊಂಡು ಪ್ರವಾಸೋದ್ಯಮಕ್ಕೆ ಗಮನಹರಿಸಬೇಕಿದೆ. ಇಲ್ಲಿನ ಸ್ಥಳೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕುಶಾಲನಗರ ಮತ್ತಿತರ ಚೆಕ್‍ಪೋಸ್ಟ್‍ಗಳಲ್ಲಿ ಹೊರಗಡೆಯಿಂದ ಬರುವವರ ಬಗ್ಗೆ ನಿಗಾವಹಿಸಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಸೂಚಿಸಿದರು.
ಬೆಂಗಳೂರಿನಿಂದ ಸಾಕಷ್ಟು ಮಂದಿ ಕೊಡಗಿಗೆ ಆಗಮಿಸಿದ್ದು, ಇವರು ಎಚ್ಚರಿಕೆಯಿಂದ ಹೋಂ ಕ್ವಾರಂಟೈನ್‍ನಲ್ಲಿ ಇದ್ದರೆ ಇಷ್ಟೊಂದು ಸೋಂಕು ಹರಡುತ್ತಿರಲಿಲ್ಲ. ಸರಿಯಾಗಿ ಮಾಹಿತಿ ಸಂಗ್ರಹಣೆ ಮಾಡದಿರುವುದರಿಂದ ಈ ರೀತಿಯಾಗಿದೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ಶಾಸಕರಾದ ಅಪ್ಪಚ್ಚುರಂಜನ್ ಅವರು ಮಾತನಾಡಿ ಹೊರಗಡೆಯಿಂದ ಬಂದವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು. ಕಿಟ್‍ಗಳನ್ನು ಹೆಚ್ಚುವರಿಯಾಗಿ ತರಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಇದರಿಂದ ಪ್ರತಿಯೊಬ್ಬರೂ ಪರೀಕ್ಷಿಸಿಕೊಂಡು ಕೋವಿಡ್-19 ನಿಯಂತ್ರಣ ಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಗಮನಹರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಗೆ ಹೆಚ್ಚುವರಿಯಾಗಿ ಕಿಟ್‍ಗಳು ಬೇಕಿದ್ದಲ್ಲಿ ತರಿಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಜಿಲ್ಲೆಯ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದು ಸಚಿವರು ಹೇಳಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಅಕ್ರಮ ಸಕ್ರಮ ಯೋಜನೆಯಡಿ ಕಡತಗಳನ್ನು ಕಾಲ ಕಾಲಕ್ಕೆ ವಿಲೇವಾರಿ ಮಾಡುತ್ತಿಲ್ಲ ಎಂದು ದೂರಿದರು.
ನಮೂನೆ-50, 53 ರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ತಕ್ಷಣವೇ ಸ್ಪಂದಿಸಬೇಕು. ಆದರೆ ಈ ಕೆಲಸವಾಗುತ್ತಿಲ್ಲ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು. ಬಂದೂಕು ಪರವಾನಿಗೆ ನೀಡಲು ಅರಣ್ಯದಂಚಿನ ಹತ್ತು ಕಿಲೊ ಮೀಟರ್ ವ್ಯಾಪ್ತಿಗೆ ಎನ್‍ಒಸಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಎಲ್ಲರೂ ಶ್ರಮಿಸಬೇಕಿದೆ. ಅಭಿವೃದ್ಧಿಯ ಜೊತೆಯ ಕೋವಿಡ್-19 ವಿರುದ್ದ ಹೋರಾಡಬೇಕಿದೆ. ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಸೈನಿಕರಿಗೆ ಸಹ ಅಭಿನಂದನೆ ಹೇಳಬೇಕಿದೆ. ಈ ವರ್ಷದ ಯೋಜನೆಗಳಿಂದ ಕಣ್ಣಿಗೆ ಕಾಣುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋವಿಡ್-19 ಸಂಬಂಧ ಮಾಹಿತಿ ನೀಡಿದರು. ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಇತರರು ಇದ್ದರು.