ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ : ಪಶು ಪ್ರಾಣಿಗಳ ಆರೋಗ್ಯಕ್ಕೂ ಒತ್ತು ನೀಡಿ : ಸಚಿವ ವಿ.ಸೋಮಣ್ಣ ಸಲಹೆ

27/07/2020

ಮಡಿಕೇರಿ ಜ.27 : ಮನುಷ್ಯನ ಆರೋಗ್ಯದಂತೆ ಪಶು ಪ್ರಾಣಿಗಳ ಆರೋಗ್ಯವು ಬಹುಮುಖ್ಯವಾದದ್ದು ಎಂದು ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಸೋಮವಾರಪೇಟೆಯ ಪಶುವೈದ್ಯಕೀಯ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ ಹಾಗೂ ಅಂಕನಹಳ್ಳಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಶು ಆಸ್ಪತ್ರೆಗಳು ರೈತರ ಬೆನ್ನುಲುಬು ಇದ್ದಂತೆ, ಪಶುಪಾಲನೆ ಕೃಷಿ ಚಟುವಟಿಕೆ ಹಾಗೂ ಹೈನುಗಾರಿಕೆಗೆ ಪೂರಕವಾದದ್ದು. ಜೀವನ ನಿರ್ವಹಣೆಗೆ ಹೈನುಗಾರಿಕೆ ಮೂಲಕ ಹೆಚ್ಚಿನ ಆದಾಯವನ್ನು ಕೃಷಿಕರು ಪಡೆಯಲು ಅನುಕೂಲವಾಗಿದೆ ಎಂದು ಅವರು ತಿಳಿಸಿದರು.
ಕುರಿ, ಕೋಳಿ, ಹಸು ಹೀಗೆ ರೈತನ ಉಪ ಕಸುಬಿಗೆ ಪೂರಕವಾದ ವಾತಾವರಣ ನಿರ್ಮಿಸಲು ಪಶುವೈದ್ಯಕೀಯ ಆಸ್ಪತ್ರೆಗಳು ಪ್ರಮುಖ ಪಾತ್ರ ವಹಿಸುತ್ತಿದೆ. ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆ ಇದ್ದು, ಇದನ್ನು ಶೀಘ್ರದಲ್ಲಿ ನೇಮಕಾತಿ ಮೂಲಕ ಸುಧಾರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಸರ್ಕಾರವು ಹಾಲಿಗೆ 6 ರೂ.ಗಳ ಪ್ರೋತ್ಸಾಹ ಧನ ನೀಡುತ್ತಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಕೊರೊನಾ ದೊಡ್ಡ ಖಾಯಿಲೆ ಅಲ್ಲ. ಜನರು ಸಾಮಾಜಿಕ ಅಂತರ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಕೊರೊನಾ ಹರಡುವಿಕೆ ತಡೆಗಟ್ಟಬಹುದು. ಜನರು ಕೊರೊನಾಗೆ ಭಯ ಪಡುವ ಅಗತ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸೋಮವಾರಪೇಟೆಯಲ್ಲಿ ಸರ್ಕಾರಿ ಕಾಲೇಜು, ಹೆಣ್ಣು ಮಕ್ಕಳ ಕಾಲೇಜು ಆರಂಭಿಸಲು 100 ಕೋಟಿ ರೂ. ಮೊತ್ತವನ್ನು ಅನುಮೋದಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಚೆನ್ನರಾಯಪಟ್ಟಣ, ಮಾಕುಟ್ಟ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಡಿಪಿಆರ್ ಹಂತದಲ್ಲಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆತು ಜಿಲ್ಲೆಗೆ ಉತ್ತಮ ರಸ್ತೆ ದೊರೆಯಲಿದ್ದು, ಜಿಲ್ಲೆಯ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ರಸ್ತೆಗಳ ಅಭಿವೃದ್ಧಿ ಅತೀ ಮುಖ್ಯವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 78 ಕೋಟಿ ರೂ. ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಗ್ರಾಮೀಣ ರಸ್ತೆಗಳು ಅಭಿವೃದ್ಧಿಗೊಳ್ಳಲಿದೆ ಎಂದು ಅವರು ತಿಳಿಸಿದರು.
ಮಡಿಕೇರಿ-ಸಂಪಾಜೆ ರಸ್ತೆಯಲ್ಲಿ ಭೂ ಕುಸಿತದಿಂದ ಹಾನಿಗೊಳಗಾದ ಸ್ಥಳಗಳಲ್ಲಿ 59 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದ್ದು, ಮಡಿಕೇರಿ-ಕುಶಾಲನಗರ ರಸ್ತೆಯು 30 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣಗೊಳ್ಳಲಿದ್ದು, ಮೈಸೂರು ಮತ್ತು ಕುಶಾಲನಗರ ನಡುವಿನ ರೈಲ್ವೆ ಕಾಮಗಾರಿಯು ಕೂಡ ಶೀಘ್ರದಲ್ಲಿಯೇ ಆರಂಭಗೊಳ್ಳುವುದರೊಂದಿಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಂಸದರು ತಿಳಿಸಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಜಿಲ್ಲೆಗೆ ಒಟ್ಟು 6 ಪಶು ವೈದ್ಯಕೀಯ ಆಸ್ಪತ್ರೆಗಳು ಮಂಜೂರುಗೊಂಡಿದ್ದು, ಇಂದು ಎರಡು ಕಟ್ಟಡಗಳ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದ್ದು, ಬಾಕಿ ಇರುವ ನಾಲ್ಕು ಕಟ್ಟಡಗಳು ಸಹ ಶೀಘ್ರ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
ಹೈನುಗಾರಿಕೆ ರೈತನ ಅಭಿವೃದ್ಧಿಗೆ ಪೂರಕವಾಗಿದ್ದು, ಇದರೊಂದಿಗೆ ರೈತರು ಆರ್ಥಿಕವಾಗಿ ಬಲಿಷ್ಠರಾಗಲು ಸಹಕಾರಿಯಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಕಾಲದಲ್ಲಿ ಹಣಕಾಸು ಸೌಲಭ್ಯ ಒದಗಿಸುತ್ತದೆ ಎಂದು ಅವರು ತಿಳಿಸಿದರು.
ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ರೂ.40 ಸಾವಿರ ಮೊತ್ತದಲ್ಲಿ ಹೈನುಗಾರಿಕೆ ಪ್ರಾರಂಭಿಸಲು ಹಸುಗಳನ್ನು ಕೊಡಿಸುತ್ತಿದ್ದು, ಇದನ್ನು ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಶಾಸಕರು ತಿಳಿಸಿದರು.
ಕೊಡಗಿನ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಸಹಕಾರ ನೀಡುತ್ತಿದ್ದು, ವಸತಿ ಯೋಜನೆಗಳಿಗೆ ಹೆಚ್ಚಿನ ಉತ್ತೇಜನ ನೀಡಿದ್ದು, ಅರ್ಹರಿಗೆ ವಸತಿಯನ್ನು ದೊರಕಿಸಿಕೊಡಲು ಸರ್ಕಾರ ಕಟಿಬದ್ಧವಾಗಿದೆ ಎಂದು ಅವರು ತಿಳಿಸಿದರು.
ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಎಂಜಿನಿಯರಿಂಗ್ ಕಾಲೇಜು, ಪದವಿ ಕಾಲೇಜುಗಳು, ಸೇರಿದಂತೆ ಶೈಕ್ಷಣಿಕ, ವಸತಿ, ಹೀಗೆ ಎಲ್ಲಾ ಆಯಾಮದಲ್ಲು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವುದಾಗಿ ಶಾಸಕರು ತಿಳಿಸಿದರು.
ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ತಡೆಯಲು ಹೊರ ದೇಶ, ಜಿಲ್ಲೆಗಳಿಂದ ಆಗಮಿಸುವವರು ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿ ಇರುವುದರೊಂದಿಗೆ ಕೊರೊನಾ ಹರಡದಂತೆ ತಡೆಗಟ್ಟಲು ಎಲ್ಲರೂ ಸಹಕರಿಸಬೇಕಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ, ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುಳ ಕೆ.ಆರ್, ಜಿ.ಪಂ. ಸದಸ್ಯರಾದ ಸರೋಜಮ್ಮ, ಬಿ.ಜೆ.ದೀಪಕ್, ಸೋಮವಾರಪೇಟೆ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಪುಷ್ಪ ರಾಜೇಶ್, ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಟಿ.ಪಿ.ತಂಗಮ್ಮ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಇತರರು ಇದ್ದರು.
ಪಶುಪಾಲನಾ ಇಲಾಖೆಯ ಉಪ ನಿದೇಶಕರಾದ ಎ.ಬಿ.ತಮ್ಮಯ್ಯ ಅವರು ಸ್ವಾಗತಿಸಿದರು. ಸೋಮವಾರಪೇಟೆ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರಾದ ಡಾ.ಎಸ್.ವಿ.ಬದಾಮಿ ಅವರು ನಿರೂಪಿಸಿದರು.