ಸವಾಲುಗಳ ನಡುವೆ ಸರ್ಕಾರ ಯಶಸ್ಸಿನ ಹಾದಿಯಲ್ಲಿದೆ : ಸಚಿವ ವಿ.ಸೋಮಣ್ಣ ಅಭಿಪ್ರಾಯ

27/07/2020

ಮಡಿಕೇರಿ ಜು.27 : ಹಲವು ಸವಾಲುಗಳ ನಡುವೆ ರಾಜ್ಯ ಸರ್ಕಾರ ಜನಪರ ಆಡಳಿತ ನೀಡಿ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ವಸತಿ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವÀ ವಿ.ಸೋಮಣ್ಣ ತಿಳಿಸಿದ್ದಾರೆ.
ನಗರದ ಜಿ.ಪಂ ಸಭಾಂಗಣದಲ್ಲಿ ಸರ್ಕಾರದ ಸಾಧನೆ ಕುರಿತ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಜ್ಯದ ಜನರು ಸೇರಿದಂತೆ ಸರ್ವರ ಸಹಕಾರದಿಂದ ಗುರಿ ತಲುಪಲು ಪ್ರಯತ್ನಿಸಿದ್ದೇವೆ. ಕೋವಿಡ್-19 ಇಲ್ಲವಾಗಿದ್ದಿದ್ದರೆ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಒಂದೆಡೆ ಪ್ರಕೃತಿ ವಿಕೋಪ ಮತ್ತೊಂದೆಡೆ ಕೋವಿಡ್ 19 ಹೀಗೆ ಹಲವು ವಿಪತ್ತುಗಳ ನಡುವೆ ಸರ್ಕಾರ ಜನಪರವಾಗಿ ಮತ್ತು ಜನ ಮೆಚ್ಚುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಪ್ರವಾಹ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದ ಮುಖ್ಯಮಂತ್ರಿ ಅವರು ಒಬ್ಬರೇ ಒನ್ ಮ್ಯಾನ್ ಆರ್ಮಿಯಂತೆ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಜನ ಸಾಮಾನ್ಯರ ಅಳಲನ್ನು ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ವರ್ಣಿಸಿದರು.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾತಿನಂತೆ ಅನ್ನವನು ಕೊಡು ಮೊದಲು, ಬಟ್ಟೆಯನ್ನು ಕೊಡು ಉಡಲು, ಕಟ್ಟಿಕೊಡು ಮನೆಗಳನ್ನು ಇದು ಮೊದಲು ಆ ಮೇಲೆ ಉಳಿದವು ಎಂಬಂತೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು.
ಬಡವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ತಲುಪಬೇಕು. ಆ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ದೇಶದಲ್ಲಿ ಕೊಡಗು ಜಿಲ್ಲೆ ಅತ್ಯಂತ ಅವಿಸ್ಮರಣೀಯ ಜಿಲ್ಲೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಿದೆ ಎಂದು ಅವರು ತಿಳಿಸಿದರು.
ಪ್ರಕೃತಿ ವಿಕೋಪದಿಂದ ಹಾನಿಯಾಗಿದ್ದ ಕೊಡಗು ಜಿಲ್ಲೆಗೆ 536 ಕೋಟಿ ರೂ, ಘೋಷಣೆ ಮಾಡಿದ್ದು, 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಅಭಿವೃದ್ಧಿ, ಪುನರ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದರು.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ನಗರದ ಐತಿಹಾಸಿಕ ಕೋಟೆಯ ಅಭಿವೃದ್ಧಿಗಾಗಿ ಸಂಪುಟದಲ್ಲಿ ಚರ್ಚಿಸಿ 10.76 ಕೋಟಿ ರೂ.ಗಳನ್ನು ಘೋಷಿಸಿದ್ದು, ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಎಲ್ಲಾ ಬಡ ಕುಟುಂಬಗಳಿಗೆ ಆಹಾರ ಪೂರೈಕೆ, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಕ್ಷೌರಿಕರು, ಮಡಿವಾಳರು, ಚರ್ಮ ಕುಶಲಕರ್ಮಿಗಳು, ಆಟೋ ಚಾಲಕರು ಹೀಗೆ ಸಂಕಷ್ಟದಲ್ಲಿದ್ದವರಿಗೆ ಪರಿಹಾರ ಧನ ವಿತರಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮೀನುಗಾರರಿಗೆ ಮತ್ತು ನೇಕಾರರಿಗೆ ಸಹಾಯಧನ, ಜಲಜೀವನ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸರ್ಕಾರ ಒಂದು ವರ್ಷದಲ್ಲಿ ಕೈಗೊಂಡಿರುವುದು ವಿಶೇಷವಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಸ್ಪತ್ರೆಯನ್ನು ಈಗಾಗಲೇ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದೆ. ಜಿಲ್ಲೆಯ 3 ತಾಲೂಕಿನಲ್ಲಿಯೂ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲ್ಲಿ ಕೋವಿಡ್-19 ವೈರಾಣು ಪರೀಕ್ಷಾ ಪ್ರಯೋಗಾಲಯವಿದ್ದು, ದಿನವೊಂದಕ್ಕೆ 300- 400 ಮೂಗು/ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೆಚ್ಚುವರಿ 450 ಹಾಸಿಗೆಗಳ ಸಾಮಥ್ರ್ಯದ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿದೆ ಎಂದು ಅವರು ತಿಳಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ. ‘ನನ್ನ ಬೆಳೆ-ನನ್ನ ಹಕ್ಕು’ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಸಹಕಾರ ಇಲಾಖೆ ವತಿಯಿಂದ ಹಸು, ಮೀನು ಸಾಕಾಣಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 2 ಲಕ್ಷ ರೂ. ಬೆಳೆ ಸಾಲ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ಅಸಲನ್ನು ಕೃಷಿಕರು ಜೂನ್, 30 ರ ಒಳಗೆ ಪಾವತಿ ಮಾಡಿದಲ್ಲಿ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗಿದೆ.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸಂಸದರಾದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ ಸುನೀಲ್ ಸುಬ್ರಮಣಿ, ಜಿ.ಪಂ ಅಧ್ಯಕ್ಷರಾದ ಬಿ.ಎ ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮಾಮಿಶ್ರಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಇತರರು ಹಾಜರಿದ್ದರು.