ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ಮಡಿಕೇರಿ ಯುವಕ ದುರ್ಮರಣ

27/07/2020

ಸೋಮವಾರಪೇಟೆ ಜು.27 : ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡಿರುವ ಘಟನೆ ಮಾದಾಪುರದಲ್ಲಿ ಸೋಮವಾರ ನಡೆದಿದೆ.
ಮಡಿಕೇರಿ ದಾಸವಾಳ ರಸ್ತೆ ನಿವಾಸಿ, ಮುರ್ನಾಡು ಖಾಸಗಿ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ಗೌತಮ್(18) ಮೃತಪಟ್ಟವರು. ಹಿಂಬದಿ ಸವಾರ ಮೂರ್ನಾಡು ಕಾಂತೂರು ಗ್ರಾಮದ ಹರ್ಷ ಗಾಯಗೊಂಡವರು.
ಸೋಮವಾರ ವಿದ್ಯಾರ್ಥಿಗಳಾದ ಶರತ್, ಹೃತಿಕ್ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಮಾದಾಪುರ ಸಮೀಪವಿರುವ ಕೋಟೆಬೆಟ್ಟವೇರಲು ಆಗಮಿಸಿದ್ದರು. ಬೆಟ್ಟವೇರಲು ನಿಷೇಧವಿರುವುದರಿಂದ ಗೌತಮ್ ಹಾಗು ಹರ್ಷ ಒಂದು ಬೈಕ್‍ನಲ್ಲಿ ವಾಪಾಸ್ಸು ತೆರಳುವಾಗ ಮಾದಾಪುರ ಪಶುವೈದ್ಯ ಆಸ್ಪತ್ರೆಯ ತಿರುವಿನಲ್ಲಿ ಆಯಾತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ತಲೆಭಾಗಕ್ಕೆ ತೀವ್ರ ಗಾಯಗೊಂಡ ಗೌತಮ್, ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ, ಸಬ್‍ಇನ್ಸ್‍ಪೆಕ್ಟರ್ ಶಿವಶಂಕರ್ ಸ್ಥಳಪರಿಶೀಲನೆ ನಡೆಸಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.