ಬುದ್ಧಿ ಕಲಿಯದ ಜನ : ಲಾಠಿ ರುಚಿ ತೋರಿಸಿದ ಸೋಮವಾರಪೇಟೆ ಪೊಲೀಸರು

27/07/2020

ಸೋಮವಾರಪೇಟೆ ಜು.27 : ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಸಂತೆ ರದ್ದಾಗಿದ್ದರೂ, ಪಕ್ಕದಲ್ಲೇ ತರಕಾರಿ ಮಾರಾಟಕ್ಕೆ ಮುಂದಾಗಿದ್ದ ಕೆಲ ವ್ಯಾಪಾರಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.
ಬೆಳಿಗ್ಗೆ ಹೈಟೆಕ್ ಮಾರುಕಟ್ಟೆಯ ಸುತ್ತಮುತ್ತ ತರಕಾರಿ ಮಾರಾಟ ಪ್ರಾರಂಭವಾದಂತೆ ಜನಸಂದಣಿ ಹೆಚ್ಚಾಗಿ ಅಂಗಡಿಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ನಾಚಪ್ಪ ಹಾಗು ಸಿಬ್ಬಂದಿಗಳು ಮುಂದಾದರು. ಅಧಿಕಾರಿಗಳ ಮಾತಿಗೆ, ಜಗ್ಗದ ವ್ಯಾಪಾರಸ್ಥರು ಅಧಿಕಾರಿಗಳೊಂದಿಗೆ ತೆರಳಿದ್ದ ಪಂಚಾಯ್ತಿ ಸದಸ್ಯರಿಗೆ ಹಿಡಿಶಾಪ ಹಾಕಿದರು.
ನಂತರ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿಗಳು ತರಕಾರಿ ಅಂಗಡಿಗಳನ್ನು ತೆರವುಗೊಳಿಸುವಂತೆ ತಿಳಿಹೇಳಿದರು. ಕೆಲ ವ್ಯಾಪಾರಸ್ಥರು ಉಢಾಪೆ ತೋರಿಸಿದ ಹಿನ್ನೆಲೆಯಲ್ಲಿ ಲಾಟಿ ರುಚಿ ತೋರಿಸಿದರು. ಪೊಲೀಸರ ವಿರುದ್ಧ ತಿರುಗಿ ಬಿದ್ದ ವ್ಯಾಪಾರಿಗಳ ತರಕಾರಿಗಳನ್ನು ಟ್ಯಾಕ್ಟರ್‍ಗೆ ತುಂಬಿಸಿ ಸಾಗಿಸಲಾಯಿತು. ಪ್ರತಿ ವಾರ ಪಂಚಾಯಿತಿ ಅದೇಶಕ್ಕೂ ಬೆಲೆ ಕೊಡದೆ, ನಿಯಮಬಾಹಿರವಾಗಿ ತರಕಾರಿ ವ್ಯಾಪಾರ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.