ಅಭಿವೃದ್ಧಿಯಲ್ಲಿ ಹಿನ್ನಡೆ : ಸಿಎಂ ವಿಷಾದ

28/07/2020

ಬೆಂಗಳೂರು ಜು.28 : ಕೋವಿಡ್ 19 ಸೋಂಕಿನಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆಯಾಗಿದ್ದು, ಕೋವಿಡ್ ಸಂಕಷ್ಟ ಬರದೇ ಇದ್ದಿದ್ದರೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದಿತ್ತು. ಪ್ರಗತಿಯಲ್ಲಿ ಹಿನ್ನಡೆ ಕಂಡ ನೋವು ನನಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸರ್ಕಾರದ ಒಂದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋವಿಡ್-19 ಅಭಿವೃದ್ಧಿ ಕೆಲಸಕ್ಕೆ ಕಂಟಕವಾಗಿರುವ ಬಗ್ಗೆ ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ಕೋವಿಡ್ ಸಾಂಕ್ರಾಮಿಕ ಇಲ್ಲದಿದ್ದರೆ ಅತಿ ವೇಗದ ಅಭಿವೃದ್ಧಿ ಸಾಧಿಸಬಹುದಿತ್ತು. ಈಗಿನ ಪರಿಸ್ಥಿತಿಯಲ್ಲಿ ಲಾಕ್ಡೌನ್ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಇನ್ನು ಮುಂದೆ ಲಾಕ್ ಡೌನ್ ಬಗ್ಗೆ ಚಿಂತೆ ಮಾಡದೇ ಕೋವಿಡ್ ಜೊತೆ ಜೀವನ ನಡೆಸುವ, ಸಂಪನ್ಮೂಲ ಕ್ರೋಢೀಕರಿಸುವ ಬಗ್ಗೆ ಗಮನಹರಿಸಬೇಕು. ಅಭಿವೃದ್ಧಿ ಸಾಧಿಸುವ ನಿಟ್ಟಿಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ನನಗೆ ರಾಜ್ಯದ ಜನರ ಋಣ ತೀರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಆಗಬೇಕಾಗಿದ್ದು ಬಹಳಷ್ಟಿದ್ದು, ಈ ನಾಡಿನ ಜನ, ರೈತ, ಕೃಷಿ ಕಾರ್ಮಿಕ, ದೀನದಲಿತರು, ಬಡವರ ಏಳಿಗೆಗೆ ಪ್ರಯತ್ನಿಸೋಣ. ಆರ್ಥಿಕ ಸೋರಿಕೆಗೆ ಕಡಿವಾಣ ಹಾಕಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸೋಣ ಎಂದರು.