ಸಂಸತ್ ಅಧಿವೇಶನದಲ್ಲಿ ಕಾಫಿ, ಕರಿಮೆಣಸು ಕೃಷಿ ಸಮಸ್ಯೆಗೆ ಸೂಕ್ತ ಪರಿಹಾರ : ಸಂಸದ ಪ್ರತಾಪ್ ಸಿಂಹ ಭರವಸೆ

28/07/2020

ಮಡಿಕೇರಿಜು. 28 : ರಾಜ್ಯದ ಕಾಫಿ, ಕರಿಮೆಣಸು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ವಿವಿಧ ಬೆಳೆಗಾರ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಆಗಸ್ಟ್ ನಲ್ಲಿ ನಡೆಯಲಿರುವ ಸಂಸತ್‍ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಸಂಸದರು ಭರವಸೆ ನೀಡಿದರು.

ಈ ಮೊದಲೇ ಸಂಕಷ್ಟದಲ್ಲಿದ್ದ ಕಾಫಿ, ಕರಿಮೆಣಸು ಕೃಷಿಉದ್ಯಮ ಇದೀಗ ಕೋರೋನಾ ಹಿನ್ನಲೆಯ ಲಾಕ್‍ಡೌನ್ ನಿಂದಾಗಿ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ತೀವ್ರ ಸಂಕಷ್ಟದಲ್ಲಿರುವ ಕಾಫಿ, ಕರಿಮೆಣಸು ಬೆಳೆಗಾರರ ಸಮಸ್ಯೆ ನಿವಾರಿಸುವಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಬೆಳೆಗಾರ ಒಕ್ಕೂಟಗಳ ಪ್ರಮುಖರು ಸಂಸದ ಪ್ರತಾಪ್ ಸಿಂಹ ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

ಮನವಿಯ ಮುಖ್ಯಾಂಶಗಳು :

ಬೆಳೆಗಾರರು ಮಾಡಿರುವಎಲ್ಲಾರೀತಿಯ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು., ಬೆಳೆಗಾರರ ಶೇ. 3 ರ ಬಡ್ಡಿಅನ್ವಯದ ಸಾಲದ ಪಾವತಿ ಅವಧಿಯನ್ನು ಮರು ನವೀಕರಣಗೊಳಿಸಿ ಮತ್ತಷ್ಟು ವರ್ಷಗಳಿಗೆ ವಿಸ್ತರಿಸುವಂತಾಗಬೇಕು., ಶೇ. 3 ರ ಬಡ್ಡಿಯಂತೆ ಬೆಳೆಗಾರರಿಗೆ ಮತ್ತೆ ಹೊಸದ್ದಾಗಿ ಸಾಲ ನೀಡುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಬೇಕು.

ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಡಿ ಈಗಾಗಲೇ ಕರಿಮೆಣಸು, ಅಡಿಕೆಗೆ ಇರುವಂತೆ ಕಾಫಿ ಬೆಳೆಗಾರರನ್ನೂಕೂಡ ಕೇಂದ್ರ ಸರ್ಕಾರ ಸೇರ್ಪಡೆಗೊಳಿಸಬೇಕು. ಕೇಂದ್ರ ಸರ್ಕಾರದ ಸಾಕಷ್ಟು ಮುತುವರ್ಜಿಯ ಮಧ್ಯೆಯೂ ಕರಿಮೆಣಸು ವಿದೇಶಗಳಿಂದ ಕಳ್ಳದಾರಿಯ ಮೂಲಕ ಭಾರತಕ್ಕೆ ಆಮದಾಗುತ್ತಿದೆ. ಇದರಿಂದಾಗಿ ಭಾರತದಲ್ಲಿ ಉತ್ಪಾದನೆಯಾದ ಕರಿಮೆಣಸಿಗೆ ಬೇಡಿಕೆ ಹಾಗೂ ಬೆಲೆ ಸೂಕ್ತ ರೀತಿಯಲ್ಲಿ ದೊರಕದಾಗಿದೆ. ಕೇಂದ್ರ ಸರ್ಕಾರ ಮತ್ತಷ್ಟು ಕಾಳಜಿ ವಹಿಸಿ ಕರಿಮೆಣಸಿನ ನಿಯಮಬಾಹಿರ ದಂಧೆಯನ್ನು ಮಟ್ಟಹಾಕಬೇಕು.

ಕಾಫಿ, ಕರಿಮೆಣಸು ಸಂಬಂಧಿತ ಸಮಸ್ಯೆಗಳ ಸಮಗ್ರ ಮಾಹಿತಿಯನ್ನು ನಿಯೋಗದ ಪ್ರಮುಖರಿಂದ ಪಡೆದ ಸಂಸದ ಪ್ರತಾಪ್ ಸಿಂಹ ಮುಂದಿನ ಲೋಕಸಭಾ ಅಧಿವೇಶನಕ್ಕೂ ಮುನ್ನ ಕೇಂದ್ರ ವಾಣಿಜ್ಯ ಸಚಿವರಲ್ಲಿಗೆ ಬೆಳೆಗಾರರ ನಿಯೋಗಕರೆದೊಯ್ದು ಮತ್ತೊಮ್ಮೆ ಸಮಸ್ಯೆ ಸಂಬಂಧಿತ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಕೊಡಗು ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಾರ್ಯಪ್ಪ ಪೀಟು, ಸಂಚಾಲಕರಾದ ನಂದಾ ಬೆಳ್ಯಪ್ಪ, ಕೆ.ಕೆ.ವಿಶ್ವನಾಥ್, ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್, ಖಜಾಂಚಿ ವಿಜಯ್ ನಂಜಪ್ಪ, ಗೋಣಿಕೊಪ್ಪ ಎಪಿಎಂಸಿ ಉಪಾಧ್ಯಕ್ಷೆ ಬೊಳ್ಳಜೀರ ಸುಶೀಲಾ ಅಶೋಕ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶರಿನ್ ಸುಬ್ಬಯ್ಯ, ನಿಯೋಗದಲ್ಲಿದ್ದರು.