ಕೋವಿಡ್-19 : ಬಕ್ರೀದ್ ಹಬ್ಬದ ಪ್ರಾರ್ಥನೆ ಸಂದರ್ಭ ಮುನ್ನೆಚ್ಚರಿಕೆ ವಹಿಸಲು ವಕ್ಫ್ ಮಂಡಳಿ ಸೂಚನೆ

28/07/2020

ಮಡಿಕೇರಿ ಜು.28 : ವಿಶ್ವದಾದ್ಯಂತ ಹರಡಿರುವ ಕೋವಿಡ್-19 ಕೊರೊನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬದ ಪ್ರಾರ್ಥನೆಯನ್ನು ನಿರ್ವಹಿಸುವ ಸಲುವಾಗಿ ಯಾವುದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಟ್ಟು ಗೂಡುವುದನ್ನು ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ವಹಿಸುವ ಮೊದಲು ಆಡಳಿತ ಮಂಡಳಿಯವರು ಸಾಮಾಜಿಕ ಅಂತರ ಮತ್ತು ಇತರ ಸೋಂಕು ಹರಡದಿರುವಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಮಸೀದಿಗಳಲ್ಲಿ ನಮಾಜ್‍ಗೆ ಕಡ್ಡಾಯವಾಗಿ ತಮ್ಮ ತಮ್ಮ ಮನೆಗಳಲ್ಲಿ ವಜೂ ಮಾಡಿಕೊಂಡು ಬರಬೇಕು. ಮಸೀದಿಯಲ್ಲಿ ಇದ್ದ ಚಾಪೆ ಹಾಗು ಜಮಾಖಾನೆಗಳನ್ನು ತೆಗೆದು ತಮ್ಮ ಮನೆಗಳಿಂದಲೇ ಚಾಪೆ ಅಥವಾ ಜಾನಿ ಮಾಜ್ ತಂದು ನಮಾಜ್ ಮಾಡಬೇಕು. ಮಸೀದಿಗಳಲ್ಲಿನ ಟೋಪಿ ಮತ್ತು ಟವಲ್ ಗಳನ್ನು ಬಳಕೆ ಮಾಡಬಾರದು. 60 ವರ್ಷ ಮೇಲ್ಪಟ್ಟ ಹಿರಿಯರು ಹಾಗು 10 ವರ್ಷದೊಳಗಿನ ಮಕ್ಕಳು ಮಸೀದಿಗಳಿಗೆ ಹೋಗದೆ ತಮ್ಮ ಮನೆಯಲ್ಲಿಯೇ ನಮಾಜ್ ನಿರ್ವಹಿಸುವುದು. ನಮಾಜ್ ನಿರ್ವಹಿಸುವಾಗ 6 ಅಡಿ ಅಂತರವನ್ನು ಕಾಯ್ದುಕೊಳ್ಳುವುದು. ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯವಾಗಿದೆ. ಮಸೀದಿಯ ಒಳಗೆ ಬರುವ ಮೊದಲು ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈ ಸ್ವಚ್ಚ ಮಾಡಿಕೊಳ್ಳಬೇಕು.
ಕೈಗೆ ಕೈ (ಮುಸಾಫಾ) ಕೊಡಬಾರದು. ಮಸೀದಿಯ ನೆಲಕ್ಕೆ ಕೀಟನಾಶಕ ಔಷಧಿಯಿಂದ ಸ್ವಚ್ಚ ಮಾಡುತ್ತಾ ಇರಬೇಕು. ಮಸೀದಿಯ ಮೂತ್ರಾಲಯ ಹಾಗೂ ಶೌಚಾಲಯದಲ್ಲಿ ಕೀಟ ನಾಶಕ ಔಷದಿ ಹಾಕಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಕೆಮ್ಮು, ನೆಗಡಿ, ಜ್ವರ ಇದ್ದವರು ಮಸೀದಿಗೆ ಬರಬಾರದು. ಮಸೀದಿಯಲ್ಲಿ ಒಟ್ಟಾಗಿ ಸೇರಿ ಧಾರ್ಮಿಕ ಗ್ರಂಥಗಳನ್ನು ಓದುವುದಾಗಲೀ, ಗುಂಪು ಚರ್ಚೆ ಮಾಡುವುದಾಗಲಿ ನಿಷೇಧಿಸಲಾಗಿದೆ. ಮಸೀದಿಯಲ್ಲಿ ಪವಿತ್ರ ಗ್ರಂಥ ಕುರಾನ್ ಹಾಗೂ ಇತರ ಯಾವುದೇ ಧಾರ್ಮಿಕ ಗ್ರಂಥಗಳನ್ನು ಸುರಕ್ಷಿತವಾಗಿ ಇಡಬೇಕು. ಮಸೀದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸದ್ಯದ ಮಟ್ಟಿಗೆ ಬಂದ್ ಮಾಡುವುದು. ಮಸೀದಿಯ ಒಳಗೆ ಏಸಿ/ ಕೂಲರ್ ಗಳನ್ನು ಉಪಯೋಗಿಸುವಂತಿಲ್ಲ. ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡುವುದು. ಅಪರಿಚಿತರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬಂದಲ್ಲಿ ಅವರ ಬಗ್ಗೆ ವಿಶೇಷ ಗಮನ ಹರಿಸುವುದು.
ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ನಿರ್ವಹಿಸುವುದು. ಒಂದು ವೇಳೆ ಅಧಿಕ ಜನರು ಆಗಮಿಸಿದ್ದಲ್ಲಿ ಎರಡು ಅಥವಾ ಮೂರು ಬ್ಯಾಚ್‍ಗಳಲ್ಲಿ ಆಯಾಯ ಮಸೀದಿಗಳಲ್ಲಿ ನಮಾಜ್ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ. ಮಸೀದಿಗಳನ್ನು ಹೊರತುಪಡಿಸಿ ಈದ್ಗಾ, ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆ ಆಯೋಜಿಸುವಂತಿಲ್ಲ. ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವಕ್ಫ್ ಅಧಿಕಾರಿ ಅವರು ತಿಳಿಸಿದ್ದಾರೆ.