ಸರ್ಕಾರದ ನಿರ್ದೇಶನದಂತೆ ಬಕ್ರೀದ್ ಹಬ್ಬ ಆಚರಿಸಲು ಜಿಲ್ಲಾಧಿಕಾರಿ ಮನವಿ

28/07/2020

ಮಡಿಕೇರಿ ಜು.28 : ಕೋವಿಡ್-19 ಹಿನ್ನಲೆ ಬಕ್ರೀದ್ ಹಬ್ಬವನ್ನು ಸರ್ಕಾರದ ನಿರ್ದೇಶನದಂತೆ ಆಚರಿಸುವಂತೆ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಧಾರ್ಮಿಕ ಮುಖಂಡರೊಂದಿಗೆ ಮಂಗಳವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಮತ್ತು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪ್ರಾರ್ಥನಾ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ಕಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು ಎಂದು ಕೋರಿದರು. .
ನಮಾಜ್ ನಿರ್ವಹಿಸುವವರ ಮಧ್ಯೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಬೇಕು, ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‍ನಿಂದ ಶುಚಿಗೊಳಿಸುವುದು ಮತ್ತಿತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಜಿಲ್ಲಾ ಪೊಲೀಸ್ ಅಧಿಕಾರಿ ಕ್ಷಮಾಮಿಶ್ರಾ ಅವರು ಮಾತನಾಡಿ ಜೀವ ರಕ್ಷಣೆ ಅತಿ ಮುಖ್ಯ ಎಂಬುದನ್ನು ಮರೆಯಬಾರದು. ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.
ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷರಾದ ಕೆ.ಎ.ಯಾಕುಬ್, ಕೋಂಡಗೇರಿ ಜಮಾತ್ ಸದಸ್ಯರಾದ ಯೂಸಫ್, ನಗರ ಎಂ.ಎಂ.ಮಸೀದಿ ಕಾರ್ಯದರ್ಶಿ ಹಾರೂನ್, ಕುಶಾಲನಗರ ಜಮಾತ್ ಮಸೀದಿ ಕಾರ್ಯದರ್ಶಿ ಮಜೀದ್, ಪ್ರಮುಖರಾದ ಉಸ್ಮಾನ್ ಇತರರು ಸರ್ಕಾರದ ನಿರ್ದೇಶನ ಪಾಲಿಸಲಾಗುವುದು. ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಡಿವೈಎಸ್ಪಿ ಗಳಾದ ದಿನೇಶ್ ಕುಮಾರ್ (ಮಡಿಕೇರಿ), ಜಯಕುಮಾರ್(ವಿರಾಜಪೇಟೆ), ಶೈಲೇಂದ್ರ (ಕುಶಾಲನಗರ), ಮೇದಪ್ಪ, ಅನೂಪ್ ಮಾದಪ್ಪ, ವಕ್ಫ್ ಮಂಡಳಿ ಅಧಿಕಾರಿ, ಧಾರ್ಮಿಕ ಮುಖಂಡರು ಇತರರು ಇದ್ದರು.
ಇನ್ನಷ್ಟು ಮಾಹಿತಿ: ಬಕ್ರೀದ್ ದಿನ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಇಚ್ಚಿಸುವಂತ ಮಸೀದಿಗಳಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಆಯಾಯ ಮಸೀದಿಗಳಲ್ಲಿ ಗರಿಷ್ಟ 50 ಜನ ಮೀರದಂತೆ ಸಾಮೂಹಿಕ ಪ್ರಾಥನೆ ನಿರ್ವಹಿಸಬಹುದು. ಒಂದು ವೇಳೆ ಅಧಿಕ ಜನರು ಆಗಮಿಸಿದಲ್ಲಿ ಎರಡು ಅಥವಾ ಮೂರು ಬ್ಯಾಚ್‍ಗಳಲ್ಲಿ ಆಯಾಯ ಮಸೀದಿಗಳಲ್ಲಿ ನಮಾಜ್ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ.
ಯಾವುದೇ ಮಸೀದಿಯ ಆಡಳಿತ ಮಂಡಳಿಯು ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರದ ಜುಮಾ ಪ್ರಾರ್ಥನೆ ಸಹಿತ ದಿನದ ಐದು ಹೊತ್ತಿನ ಸಾಮೂಹಿಕ ಪ್ರಾರ್ಥನೆಯನ್ನು ಈಗಾಗಲೇ ನಿರ್ಬಂಧಿಸಿದಲ್ಲಿ ಅಂತಹ ಮಸೀದಿಗಳ ಆಡಳಿತ ಸಮಿತಿಗಳು ಈ ನಿರ್ಧಾರವನ್ನು ಬಕ್ರೀದ್ ನಮಾಜ್‍ನಲ್ಲಿ ಸಹ ಮುಂದುವರೆಸುವುದು.
ಮಸೀದಿಗಳನ್ನು ಹೊರೆತುಪಡಿಸಿ ಇತರೆ ಯಾವುದೇ ಸ್ಥಳಗಳಲ್ಲಿ ಅಂದರೆ, ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.