ವಸತಿ ಸಚಿವರಿಗೆ ಕನಿಷ್ಠ ಒಂದು ಮನೆಯನ್ನೂ ನೀಡಲಾಗಿಲ್ಲ : ಕೊಡಗು ಜೆಡಿಎಸ್ ಟೀಕೆ

28/07/2020

ಮಡಿಕೇರಿ ಜು.28 : ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನಾಡಿನ ಜನತೆಯ ಮುಂದೆ ಸುಳ್ಳಿನ ಕಂತೆಗಳನ್ನೇ ಬಿಚ್ಚಿಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಕೊಡಗು ಜಿಲ್ಲೆಗೆ ಕನಿಷ್ಠ ಒಂದು ಮನೆಯನ್ನೂ ನೀಡಲು ಸಾಧ್ಯವಾಗಿಲ್ಲವೆಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.
ಮಳೆಹಾನಿ ಸಂತ್ರಸ್ತರಿಗೆ ಜಂಬೂರಿನಲ್ಲಿ ನಿರ್ಮಿಸಿರುವ ಮನೆಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆದು ಕೊಂಡ ಸಂತ್ರಸ್ತರಿಗೆ ಜಂಬೂರು, ಮದೆನಾಡು ಹಾಗೂ ಕರ್ಣಂಗೇರಿಯಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಆದರೆ ಅದನ್ನು ಬಿಜೆಪಿ ನೇತೃತ್ವದ ಸರ್ಕಾರದ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಆಡಳಿತಾವಧಿಯಲ್ಲಿ ಸಾಕಾಷ್ಟು ಸಾಧನೆ ಮಾಡಿರುವುದನ್ನು ನಾಡಿನ ಜನತೆ ಕಂಡಿದ್ದಾರೆ. ಸಾ.ರಾ.ಮಹೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 800 ಮನೆಗಳನ್ನು ನಿರ್ಮಿಸಿ ಮಳೆಹಾನಿ ಸಂತ್ರಸ್ತರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ. ಆದರೆ ಈಗಿನ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಸ್ವತ: ವಸತಿ ಸಚಿವರಾಗಿದ್ದರೂ ಇಲ್ಲಿಯವರೆಗೆ ಕೊಡಗು ಜಿಲ್ಲೆಗೆ ಒಂದೇ ಒಂದು ಮನೆಯನ್ನು ನೀಡಿಲ್ಲ. 2019 ರಲ್ಲಿ ಅತಿವೃಷ್ಟಿಗೆ ಸಿಲುಕಿ ಆಶ್ರಯವೇ ಇಲ್ಲದೆ ಅತಂತ್ರವಾದ ಕುಟುಂಬಗಳಿಗೆ ನೂತನ ಮನೆಗಳನ್ನು ನೀಡಲಾಗದ ಬಿಜೆಪಿ ಸರ್ಕಾರದ ಸಾಧನೆ ಶೂನ್ಯವೆಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಕನಿಷ್ಠ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನವನ್ನೇ ನೀಡಲಾಗದ ಹೀನಾಯ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಅಸಹಾಯಕರು ಮಾಸಿಕ ವೇತನ ಸಿಗದೆ ಪರದಾಡುವಂತ್ತಾಗಿದೆ.
ಒಂದು ವರ್ಷದ ಆಡಳಿತಾವಧಿಯಲ್ಲಿ ಸರ್ಕಾರ ಕೊಡಗು ಜಿಲ್ಲೆಗೆ ಯಾವ ಕೊಡುಗೆಯನ್ನು ನೀಡಿದೆ ಎನ್ನುವುದನ್ನು ಸಚಿವ ವಿ.ಸೋಮಣ್ಣ ಅವರು ತಮ್ಮ ಮನಸಾಕ್ಷಿಯ ಮೂಲಕ ಜಿಲ್ಲೆಯ ಜನತೆಗೆ ಸತ್ಯವನ್ನು ನುಡಿಯಲಿ ಎಂದು ಗಣೇಶ್ ಸವಾಲು ಹಾಕಿದರು.
ಕೊಡಗಿನ ಜನತೆ ನಿರಂತರವಾಗಿ ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದರೂ ದುರಸ್ತಿ ಮಾಡುವ ಶಕ್ತಿಯೇ ಸರ್ಕಾರಕ್ಕಿಲ್ಲದಾಗಿದೆ ಎಂದು ಅವರು ಆರೋಪಿಸಿದರು.