ಟಿಪ್ಪು ಸುಲ್ತಾನ್ ಪಾಠಕ್ಕೆ ಕತ್ತರಿ

29/07/2020

ಬೆಂಗಳೂರು ಜು.29 : ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್) ಮೈಸೂರು ಇತಿಹಾಸದ ಪ್ರಮುಖ ಭಾಗವಾದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆದು ಹಾಕಿದೆ, ಕೋವಿಡ್ ಕಾರಣದಿಂದಾಗಿ ಸಮಯದ ಕೊರತೆ ನೆಪವೊಡ್ಡಿ ಮೈಸೂರಿನ ಏಳನೇ ತರಗತಿ ಸಮಾಜ ವಿಜ್ಞಾನ ಪಠ್ಯದ ಐತಿಹಾಸಿಕ ಚರಿತ್ರೆ ಭಾಗದಿಂದ ಟಿಪ್ಪು ಸುಲ್ತಾನ್ ಪಾಠವನ್ನು ಕಿತ್ತು ಹಾಕಲಾಗಿದೆ.
ಏತನ್ಮಧ್ಯೆ ಮೈಸೂರು ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಈ ವಿಷಯಗಳ ಬಗ್ಗೆ ಪವರ್ಪಾಯಿಂಟ್ ಪ್ರಸ್ತುತಿಗಳನ್ನು ತಯಾರಿಸಿ ತೋರಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆಟಿಬಿಎಸ್ ಹೇಳಿದೆ.
2020-21ರ ಶೈಕ್ಷಣಿಕ ವರ್ಷದ ಕೆಲಸದ ದಿನಗಳನ್ನು ಅಂದಾಜು ಮಾಡಿ, ಭಾಗಗಳನ್ನು ಪರಿಷ್ಕರಣೆ ಅಥವಾ ಮೊಟಕು ಮಾಡಲಾಗಿದೆ. ಸೆಪ್ಟೆಂಬರ್ 1 ರಿಂದ 120 ದಿನಗಳಲ್ಲಿಅಗತ್ಯವಾದ ಪಠ್ಯದ ಭಾಗಗಳನ್ನು ಕಲಿಸಲು ಕೆಟಿಬಿಎಸ್ 6 ರಿಂದ 10 ನೇ ತರಗತಿಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಒಂದು ಕೈಪಿಡಿಯನ್ನು ಬಿಡುಗಡೆ ಮಾಡಿದೆ.