ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

July 29, 2020

ಮಡಿಕೇರಿ ಜು.29 : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಸಮೃದ್ಧಿ ಮತ್ತು ಕಿರುಸಾಲ ಯೋಜನೆಯಡಿ ಅರ್ಹ ಮಹಿಳೆಯರು ಮತ್ತು ಸ್ತ್ರೀ ಶಕ್ತಿ ಗುಂಪುಗಳಿಗೆ ಬ್ಯಾಂಕ್ ಸಾಲ ಹಾಗೂ ನಿಗಮದ ಸಹಾಯಧನದೊಂದಿಗೆ ಸೌಲಭ್ಯ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಿರುಸಾಲ ಯೋಜನೆಯಡಿ ಪ.ಜಾತಿ ಮತ್ತು ಪ.ಪಂ. ಸ್ತ್ರೀಶಕ್ತಿ ಸ್ವ-ಸಹಾಯ ಗುಂಪಿನ ಸದಸ್ಯರುಗಳಿಗೆ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿ ಗುಂಪಿಗೆ ರೂ. 1 ಲಕ್ಷರಿಂದ 2 ಲಕ್ಷಗಳವರೆಗೆ ಬಡ್ಡಿ ರಹಿತ ಸಾಲವನ್ನಾಗಿ ನೀಡಲಾಗುವುದು.
ಬ್ಯಾಂಕ್ ಖಾತೆ ಹೊಂದಿದ್ದು, ಚಾಲ್ತಿಯಲ್ಲಿರಬೇಕು. ಗುಂಪು ಆರ್ಥಿಕವಾಗಿ ಸದೃಢವಾಗಿದ್ದು, ಗುಂಪಿನ ಉಳಿತಾಯ ಗರಿಷ್ಟ 2 ಲಕ್ಷಗಳಿಗೆ ಮೇಲ್ಪಟ್ಟಿರಬೇಕು. ಗುಂಪು ಒಂದು ಯೋಜನಾ ಘಟಕವನ್ನು ಸ್ಥಾಪಿಸಲು ಯೋಜನಾ ವರದಿ ಹೊಂದಿರಬೇಕು. ತಾಲ್ಲೂಕು ಮಟ್ಟದ ಸ್ತ್ರೀಶಕ್ತಿ ಒಕ್ಕೂಟದಲ್ಲಿ ನೋಂದಾವಣೆಯಾಗಿದ್ದು, ರೂ.250 ಶುಲ್ಕ ಪಾವತಿಸಿ ಸದಸ್ಯತ್ವ ಹೊಂದಿರಬೇಕು. ಸದಸ್ಯರೆಲ್ಲರೂ ರೂ.50 ಛಾಪಾ ಕಾಗದದಲ್ಲಿ ಕರಾರು ಪತ್ರ, ಸ್ತ್ರೀ ಗುಂಪು ಗ್ರೇಡಿಂಗ್‍ಗೆ ಒಳಪಟ್ಟಿರಬೇಕು.
ಸಮೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆರ್ಥಿಕವಾಗಿ ಹಿಂದುಳಿದ, ಬೀದಿ ಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ನಗರ ಮತ್ತು ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ರೂ.10 ಸಾವಿರಗಳ ಪ್ರೋತ್ಸಾಹಧನವನ್ನು ನೀಡಲಾಗುವುದು.
18 ರಿಂದ 60 ವರ್ಷ ವಯೋಮಿತಿಯಲ್ಲಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರಿಂದ ಬೀದಿಬದಿ ವ್ಯಾಪಾರಿ ಎಂದು ದೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು. ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿರಬೇಕು.
ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್ ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ ಇಲ್ಲಿ ಈ ಯೋಜನೆಯ ಅರ್ಜಿಗಳು ಲಭ್ಯವಿದ್ದು ಅರ್ಹ ಮಹಿಳೆಯರು ಈ ಕಚೇರಿಗಳಿಂದ ಅರ್ಜಿ ಪಡೆದು ಸೂಕ್ತ ದಾಖಲೆಗಳೊಂದಿಗೆ ಆಗಸ್ಟ್, 07 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದರಿಂದ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು(ಪ.ಜಾ ಮತ್ತು ಪ.ಪಂ.) ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಆಸಕ್ತಿ ಇರುವ ಮಹಿಳೆಯರು ಜಿಲ್ಲಾ ವ್ಯವಸ್ಥಾಪಕರ ಕಚೇರಿ/ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್, ಮೈಸೂರು ರಸ್ತೆ, ಮಡಿಕೇರಿ ದೂ.ಸಂ: 7996368687 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

error: Content is protected !!