ಕಾಂಗ್ರೆಸ್ ಆರೋಪ ಹಾಸ್ಯಾಸ್ಪದ : ಜಿಲ್ಲಾ ಬಿಜೆಪಿ ಅಸಮಾಧಾನ

ಮಡಿಕೇರಿ ಜು.29 : ಕೊರೋನಾ ನಿರ್ವಹಣಾ ವೈದ್ಯಕೀಯ ಕಿಟ್‍ಗಳ ಖರೀದಿ ವ್ಯವಹಾರದಲ್ಲಿ ಸರ್ಕಾರ ಅವ್ಯವಹಾರ ನಡೆಸಿದೆ ಎನ್ನುವ ಕಾಂಗ್ರೆಸ್ ಆರೋಪ ಹಾಸ್ಯಾಸ್ಪದವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದು ರಾಜ್ಯ ಕೊರೋನಾದ ಕಪಿಮುಷ್ಟಿಯಲ್ಲಿ ಸಿಲುಕಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು, ಸಂಪುಟದ ಸಹೋದ್ಯೋಗಿಗಳು, ಜಿಲ್ಲೆಯ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಜನಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಕಾಳಜಿಯನ್ನು ಪರಿಗಣಿಸದೆ ಕಾಂಗ್ರೆಸ್ ಉಸ್ತುವಾರಿ ವೆಂಕಪ್ಪ ಗೌಡ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್ ಅವರುಗಳು ಆಧಾರ ರಹಿತ ಆರೋಪಗಳನ್ನು ಮಾಡಿರುವುದು ಖಂಡನೀಯವೆಂದರು.
ಕಳೆದ ನಾಲ್ಕೈದು ತಿಂಗಳುಗಳಿಂದ ವಿಶ್ವದ ವೈದ್ಯಕೀಯ ಕ್ಷೇತ್ರ ವೈರಸ್‍ನ ನಿರ್ಮೂಲನೆಗಾಗಿ ಶ್ರಮಿಸುತ್ತಿದ್ದರೆ ಮಂಜುನಾಥ್ ಕುಮಾರ್ ಅವರು ಕೊರೋನಾ ಇರುವುದೇ ಅನುಮಾನ ಎಂಬ ಬಾಲಿಶ ಹೇಳಿಕೆಯನ್ನು ನೀಡಿದ್ದಾರೆ. ಇದು ವೈದ್ಯ ಲೋಕವನ್ನು ಅನುಮಾನಿಸಿದಂತೆ ಮಾತ್ರವಲ್ಲ, ಜನರನ್ನು ಗೊಂದಲಕ್ಕೆ ಸಿಲುಕಿಸುವ ಪ್ರಯತ್ನವಾಗಿದೆ ಎಂದು ಮಹೇಶ್ ಜೈನಿ ಟೀಕಿಸಿದರು.
ದೇಶದಲ್ಲಿ ಕೊರೋನಾ ವ್ಯಾಪಿಸುವುದಕ್ಕೆ ಮೊದಲೇ ಆಗ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ಒಂದು ವೆಂಟಿಲೇಟರ್ ಗೆ 22 ಲಕ್ಷ ರೂ. ವೆಚ್ಚ ಮಾಡಿ ಖರೀದಿಸಿದ್ದು, ಇದರ ಬಗ್ಗೆ ಮೊದಲು ತನಿಖೆ ಆಗಬೇಕಿದೆ. ಕೊರೋನಾ ವ್ಯಾಪಿಸುವುದನ್ನು ನಿಯಂತ್ರಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರುಗಳು ಎಷ್ಟು ಕಾರ್ಯೋನ್ಮುಖರಾಗಿದ್ದಾರೆ ಎನ್ನುವುದು ಜಿಲ್ಲೆಯ ಜನರಿಗೆ ತಿಳಿದಿದೆ. ಜನಪ್ರತಿನಿಧಿಗಳು ನಡೆಸಿರುವ ಜನಪರ ಕಾಳಜಿಯ ಸಭೆಗಳ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಳ್ಳಲಿ ಎಂದರು.
ಕೊಡಗು ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಮೆಚ್ಚುವ ತಂಡ ಕಾಂಗ್ರೆಸ್ ಪಕ್ಷದಲ್ಲಿದೆ. ಕಾಂಗ್ರೆಸ್ ನೊಳಗಿನ ಬಂಡಾಯದಿಂದ ಬೇಸತ್ತಿರುವ ಮಂಜುನಾಥ್ ಕುಮಾರ್ ಅವರು ಕಾರ್ಯಕರ್ತರ ಗಮನವನ್ನು ಬೇರೆಡೆ ಸೆಳೆಯಲು ಇಲ್ಲಸಲ್ಲದ ಆರೋಪದಲ್ಲಿ ತೊಡಗಿದ್ದಾರೆ ಎಂದು ಮಹೇಶ್ ಜೈನಿ ವ್ಯಂಗ್ಯವಾಡಿದರು.
ಕೊರೋನಾ ವ್ಯಾಪಿಸುವುದನ್ನು ತಡೆಯುವಲ್ಲಿ ಜಿಲ್ಲಾಡಳಿತ ಹೆಚ್ಚು ಕಾರ್ಯಪ್ರವೃತ್ತವಾಗಿದೆ, ಆದರೆ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಜಿಲ್ಲಾಡಳಿತ ವಿಫಲವಾಗಿದೆ ಎಂದು ಟೀಕಿಸುತ್ತಿದ್ದು, ಇದು ಖಂಡನೀಯ. ಸಂಕಷ್ಟದ ಪರಿಸ್ಥಿತಿಯಲ್ಲಿ ಅಧಿಕಾರಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಮಾಡಬೇಕೆ ಹೊರತು ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಾಗಿ ಅಪಪ್ರಚಾರ ಮಾಡಬಾರದೆಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ರಾಜೀನಾಮೆ ಕೇಳುತ್ತಿರುವ ಜೆಡಿಎಸ್ ಜಿಲ್ಲಾಧ್ಯಕ್ಷರು ಪತ್ರಿಕಾ ಹೇಳಿಕೆ ನೀಡುವುದನ್ನು ಬಿಟ್ಟರೆ ಬೇರೇನು ಮಾಡಿದ್ದಾರೆ ಎನ್ನುವುದನ್ನು ಮೊದಲು ತಿಳಿಸಲಿ ಎಂದು ಮಹೇಶ್ ಜೈನಿ ಸವಾಲು ಹಾಕಿದರು.
ಕೊರೋನಾ ಲಾಕ್ ಡೌನ್ ಸಂದರ್ಭದಿಂದಲೂ ಶಾಸಕರಾದಿಯಾಗಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಜನಸಾಮಾನ್ಯರ ಮತ್ತು ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸಿ ಅಗತ್ಯ ಸಹಕಾರವನ್ನು ನೀಡಿದ್ದಾರೆ.
ಪ್ರಾಕೃತಿಕ ವಿಕೋಪದ ಸಂದರ್ಭ ಅತಂತ್ರರಾದ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡುವಲ್ಲಿ ಕೊಡಗಿನ ಶಾಸಕರು ಹೆಚ್ಚು ಕಾಳಜಿ ತೋರಿದ್ದಾರೆ. ಆಮೆಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿಯನ್ನು ಚುರುಕುಗೊಳಿಸಿ ಫಲಾನುಭವಿಗಳಿಗೆ ಆಶ್ರಯ ಸಿಗುವಂತೆ ಮಾಡಿದ್ದಾರೆ ಎಂದು ಮಹೇಶ್ ಜೈನಿ ಸಮರ್ಥಿಸಿಕೊಂಡರು.
ಕೊರೋನಾ ವೈರಸ್ ಇಡೀ ವಿಶ್ವದ ವಿರುದ್ಧ ಸಮರ ಸಾರಿರುವಾಗ ಇದನ್ನು ನಿರ್ಮೂಲನೆ ಮಾಡಲು ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕೆ ಹೊರತು ಕ್ಷುಲ್ಲಕ ರಾಜಕಾರಣ ಮಾಡಬಾರದು ಎಂದರು.
ಪ್ರಧಾನಿ ನರೇಂದ್ರಮೋದಿ ಅವರು, ಭಾರತೀಯರ ಬಹು ದೊಡ್ಡ ಕನಸಾಗಿದ್ದ ರಾಮ ಮಂದಿರ ನಿರ್ಮಾಣದ ಹೊಸ್ತಿಲಲ್ಲಿದ್ದಾರೆ. ಅಲ್ಲದೆ ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಬರ ಮಾಡಿಕೊಳ್ಳುವ ಮೂಲಕ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿದ್ದಾರೆ. ಇದು ಇಡೀ ದೇಶವೇ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಮಹೇಶ್ ಜೈನಿ ಹರ್ಷ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ಸಿ.ಸತೀಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಪ್ಪಣ್ಣ, ಉಮೇಶ್ ಸುಬ್ರಮಣಿ ಹಾಗೂ ಮಾಧ್ಯಮ ಸಹ ಸಂಚಾಲಕ ಶಜೀಲ್ ಕೃಷ್ಣ ಉಪಸ್ಥಿತರಿದ್ದರು.
