ಸರ್ಕಾರದ ಕಡೆಗಣನೆ ಆರೋಪ : ಮಡಿಕೇರಿಯಲ್ಲಿ ಆರೋಗ್ಯ ಸಹಾಯಕಿಯರ ಪ್ರತಿಭಟನೆ

ಮಡಿಕೇರಿ ಜು.29 : ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಮತ್ತು ಹುದ್ದೆಯನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲೆಯ ಕಿರಿಯ ಆರೋಗ್ಯ ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಆರೋಗ್ಯ ಸಹಾಯಕಿಯರಾಗಿ ಆಯ್ಕೆಯಾಗಿ ಇಲಾಖೆಯು ವಹಿಸಿದ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮವನ್ನು ತಪ್ಪದೆ ಮಾಡಿಕೊಂಡು ಬರುತ್ತಿದ್ದೇವೆ. ಕಳೆದ ಐದು ತಿಂಗಳಿನಿಂದ ಒಂದು ದಿನವು ರಜೆ ಪಡೆಯದೆ ಕೋವಿಡ್-19 ಕಾರ್ಯಗಳನ್ನು ನಿಯಂತ್ರಿತ ಪ್ರದೇಶದಲ್ಲಿ ಮತ್ತು ಇತರೆಡೆಗಳಲ್ಲಿ ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇವೆ. ಸರ್ಕಾರ ವಹಿಸಿದ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದರೂ ಕೂಡ ಅಗತ್ಯ ಸೌಲಭ್ಯಗಳನ್ನು ಮಾತ್ರ ನೀಡುತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಅಥವಾ ಕುಟುಂಬದ ಸದಸ್ಯರಿಗೆ ಮಾರಣಾಂತಿಕ ರೋಗಗಳು ಬಂದರೆ ಯಾವುದೇ ಭದ್ರತೆ ಇಲ್ಲದಾಗಿದೆ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ನಮ್ಮನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲ, ಸೇವಾ ಸೌಲಭ್ಯ ಮತ್ತು ಸೇವಾ ಭದ್ರತೆಯೂ ಇಲ್ಲದಾಗಿದ್ದು, ಸಂಕಷ್ಟದಲ್ಲಿರುವ ಆರೋಗ್ಯ ಸಹಾಯಕಿಯರ ನೆರವಿಗೆ ಸರ್ಕಾರ ಬರಬೇಕೆಂದರು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ರೇವತಿ, ಶೋಭ, ಗೀತಾ, ಪ್ರಮೀಳಾ, ರಂಜಿತಾ, ದಿವ್ಯ, ನಯನ, ಶಬನಂ, ರೂಪ, ಲಸಿಕಾ ಸೇರಿದಂತೆ 16 ಮಂದಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

