ರಾಮಮಂದಿರ ಭೂಮಿ ಪೂಜೆ : ಕೊಡಗಿನ ಮನೆ ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ವಿ.ಹಿಂ.ಪ ಕರೆ

29/07/2020

ಮಡಿಕೇರಿ ಜು. 29 : ಭರತ ಭೂಮಿಯಲ್ಲಿ ಅಯೋಧ್ಯೆಯ ಶ್ರೀರಾಮನ ಜನ್ಮ ಸ್ಥಳದಲ್ಲಿ ಭವ್ಯ ಮಂದಿರದ ಪುನರುತ್ಥಾನಕ್ಕೆ ಆ.5ರಂದು ಬೆಳಿಗ್ಗೆ 10.30ಗಂಟೆಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು, ಸಾಧುಸಂತರು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೂಮಿಪೂಜೆ ನೆರವೇರಿಸಲಿದ್ದಾರೆ.
ಶ್ರೀರಾಮನ ಭವ್ಯ ಮಂದಿರ ನಿರ್ಮಾಣದೊಂದಿಗೆ ಭಾರತದ ಸಾಮಾಜಿಕ ಸಮರಸತೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ವಿಶ್ವ ಕಲ್ಯಾಣದ ಆಶಯದೊಂದಿಗೆ ಈ ಕಾರ್ಯಕ್ರಮ ನೆರವೇರಲಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ವಿಧಿವತ್ತಾಗಿ ಶುಭ ಮುಹೂರ್ತದಲ್ಲಿ ಚಾಲನೆ ನೀಡಲಿದ್ದಾರೆ.
ದೇಶದೆಲ್ಲೆಡೆ ಮಠಮಂದಿರಗಳು ಆಶ್ರಮಗಳು ದೇವನೆಲೆಗಳಲ್ಲಿ ಮನೆಮನೆಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ ಭಜನೆ ಪೂಜೆ ದೀಪಾರಾಧನೆಯೊಂದಿಗೆ ಶ್ರೀರಾಮನ ಆರಾಧನೆಗೆ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಕರೆ ನೀಡಿದೆ. ಅಂತೆಯೆ ಈ ಶುಭದಿನದಂದು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮತ್ತು ಪೂಜ್ಯ ಶಂಕರಲಿಂಗ ಸ್ವಾಮಿಗಳ ಜಯಂತಿ ಇದ್ದು, ಶ್ರಾವಣ ಮಾಸದ ಈ ಪರ್ವದಲ್ಲಿ ಕೊಡಗಿನ ಎಲ್ಲಾ ದೇವಾಲಯಗಳು ಹಾಗೂ ಮನೆಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರೀ ರಾಮನ ಕಾರ್ಯಕ್ಕೆ ಕೈ ಜೋಡಿಸುವಂತೆ ವಿ. ಹಿಂ. ಪ ಜಿಲ್ಲಾ ಅಧ್ಯಕ್ಷ ಎಂ.ಎಂ.ಬೋಪಯ್ಯ, ಕಾರ್ಯದರ್ಶಿ ಡಿ.ನರಸಿಂಹ ಕೊಡಗು ವಿ.ಹಿಂ.ಪ.ದ ಮಠ ಮಂದಿರ ಪ್ರಮುಖರಾದ ಚಿ. ನಾ. ಸೋಮೇಶ್ ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕ ಕೆ.ಹೆಚ್.ಚೇತನ್ ಕರೆ ನೀಡಿದ್ದಾರೆ.