ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿಸಿ ಕುಶಾಲನಗರದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

July 29, 2020

ಮಡಿಕೇರಿ ಜು. 29 : ಕಾರ್ಮಿಕರ ವ್ಯತ್ಯಸ್ಥ ತುಟ್ಟಿ ಭತ್ಯೆಯನ್ನು ತಡೆಹಿಡಿದು ಕೈಗಾರಿಕೆ ಹಾಗೂ ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕುಶಾಲನಗರದಲ್ಲಿ ಸರಕಾರದ ಆದೇಶಗಳ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಿತು.
ಕುಶಾಲನಗರ ನಾಡಕಛೇರಿ ಮುಂಭಾಗ ಸೇರಿದ ಸಮಿತಿ ಪ್ರಮುಖರು ರಾಜ್ಯ ಸರಕಾರ 2020-21ನೇ ಸಾಲಿನ ಕಾರ್ಮಿಕರ ವ್ಯತ್ಯಸ್ಥ ತುಟ್ಟಿ ಭತ್ಯೆ ತಡೆಹಿಡಿದು ಕೈಗೊಂಡಿರುವ ತೀರ್ಮಾನ ಖಂಡನೀಯ ಎಂದಿದ್ದಾರೆ. ಈ ಮೂಲಕ ಕಾರ್ಮಿಕರ ಹಕ್ಕುಗಳನ್ನು ರಾಜ್ಯ ಸರಕಾರ ಮೊಟಕುಗೊಳಿಸಿದಂತಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕ್ರಿಯಾ ಸಮಿತಿ ಪ್ರಮುಖರಾದ ಪಿ.ಆರ್.ಭರತ್, ಎಚ್.ಎಂ.ಸಣ್ಣಯ್ಯ, ಎನ್.ಎಂ.ಮುತ್ತಪ್ಪ ಮತ್ತಿತರರ ನೇತೃತ್ವದಲ್ಲಿ ನಾಡಕಛೇರಿ ಮುಂಭಾಗ ಸೇರಿದ ಕ್ರಿಯಾ ಸಮಿತಿ ಸದಸ್ಯರು ಸರಕಾರಕ್ಕೆ ಧಿಕ್ಕಾರ ಕೂಗಿದರು. ನಂತರ ಕಂದಾಯ ಅಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಪಿ.ಆರ್.ಭರತ್, ಕಾರ್ಮಿಕರ ತುಟ್ಟಿ ಭತ್ಯೆ ತಡೆಹಿಡಿದು ಕೈಗಾರಿಕೆ ಮತ್ತು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗೆ ಕಾರ್ಮಿಕರ ತೀವ್ರ ವಿರೋಧವಿದೆ ಎಂದಿದ್ದಾರೆ.
ನಾಪಂಡ ಮುತ್ತಪ್ಪ ಅವರು ಮಾತನಾಡಿ, ಕೂಡಲೆ ತಡೆಹಿಡಿದಿರುವ ತುಟ್ಟಿಭತ್ಯೆ ಆದೇಶ ಮತ್ತು ಕಾನೂನು ತಿದ್ದುಪಡಿಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

error: Content is protected !!