ಮೀನು ಕೃಷಿ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

29/07/2020

ಮಡಿಕೇರಿ ಜು.29 : ಜಿಲ್ಲೆಯಲ್ಲಿ ಮೀನು ಕೃಷಿ ಅಭಿವೃದ್ಧಿ ಪಡಿಸಲು ಇರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ‘ಆತ್ಮ ನಿರ್ಭರ ಭಾರತ’ ಕಾರ್ಯಕ್ರಮದಡಿ ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ’ ಪ್ರಸಕ್ತ ಸಾಲಿನ ಜಿಲ್ಲಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕಾಫಿ ತೋಟ ಮತ್ತು ಕೃಷಿ ಹೊಂಡಗಳಲ್ಲಿ ಮೀನು ಕೃಷಿ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು. ಜೊತೆಗೆ ಮತ್ಸ್ಯ ಕೃಷಿ ಸಂಬಂಧ ರೈತರಿಗೆ ತರಬೇತಿ ನೀಡಬೇಕು. ಹಾಗೆಯೇ ಮೀನುಗಳ ಸಾಕಾಣಿಗೆಗೆ ಬೇಕಾದ ಆಹಾರ ಪದಾರ್ಥಗಳಿಗೂ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ ಅವರು ಮಾಹಿತಿ ನೀಡಿ ಆತ್ಮ ನಿರ್ಭರ್ ಭಾರತ ಅಡಿಯಲ್ಲಿ ಈ ಯೋಜನೆ ತರಲಾಗಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಒಂದು ಜಿಲ್ಲಾ ಸಮಿತಿ ಇರುತ್ತದೆ ಎಂದು ಅವರು ತಿಳಿಸಿದರು.
ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ 66 ಕಾರ್ಯಕ್ರಮ ನೀಡಲಾಗಿದೆ. ಈ ಮೂಲಕ ಜಿಲ್ಲೆಯ ಮತ್ಸ್ಯ ಕೃಷಿಗೆ ಅನುಕೂಲವಾಗುವಂತೆ 4.81 ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ ಯೋಜನೆ ಮತ್ತು ಕಾರ್ಯಕ್ರಮದ ಕುರಿತು ಹಲವು ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅವರು ಈಗಾಗಲೇ ನಿರ್ಮಾಣಗೊಂಡಿರುವ ಕೊಳಗಳಲ್ಲಿ ಮೀನು ಕೃಷಿಗೆ ಅಗತ್ಯ ಅವಕಾಶಗಳನ್ನು ಕಲ್ಪಿಸಿ. ಇದರೊಂದಿಗೆ ಹೊಸ ಕೊಳಗಳ ನಿರ್ಮಾಣಕ್ಕೂ ಅವಕಾಶ ಒದಗಿಸುವಂತೆ ಅವರು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶು ಸಂಗೋಪನಾ ಇಲಾಖೆ, ಐಟಿಡಿಪಿ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಅನೀಸ್ ಕಣ್ಮಣಿ ಜಾಯ್ ಅವರು ಸಲಹೆ ಮಾಡಿದರು.
ಸ್ತ್ರೀ ಶಕ್ತಿ ಸ್ವ ಸಹಾಯ ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಅಲಂಕಾರಿಕಾ ಮೀನು ಸಾಕಾಣಿಕೆ ಬಗ್ಗೆ ಪ್ರೋತ್ಸಾಹ ನೀಡಬೇಕು. ಇದರೊಂದಿಗೆ ಕ್ರಿಯಾ ಯೋಜನೆಯ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿ ಮತ್ಸ್ಯ ಕೃಷಿ ಅಭಿವೃದ್ಧಿಗೆ ಬೇಕಾದ ಕಾರ್ಯಕ್ರಮಗಳನ್ನು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಸೇರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕರಾದ ಕೆ.ರಾಜು, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ.ಪ್ರಭಾಕರ್, ನಗರದ ಕೃಷಿ ಸಂಶೋಧನಾ ಕೇಂದ್ರದ ಡಾ.ಬಸವಲಿಂಗಯ್ಯ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಸಚಿನ್(ಹಾರಂಗಿ), ಮಂಜುನಾಥ್ (ಸೋಮವಾರಪೇಟೆ), ಸಚಿನ್ (ಪೊನ್ನಂಪೇಟೆ) ಮೀನುಗಾರಿಕೆ ಇಲಾಖೆಯ ಹಾರಂಗಿ ವಿಭಾಗದ ಮೇಲ್ವಿಚಾರಕರಾದ ಮಹದೇವು, ಜಿ.ಪಂ.ನ ವಸಂತ್ ಇತರರು ಹಾಜರಿದ್ದರು.