ಬಳಕೆಯಾದ ಪಿಪಿಇ ಕಿಟ್ ರಸ್ತೆ ಬದಿಯಲ್ಲಿ ಪತ್ತೆ : ಹಾರಂಗಿ ಗ್ರಾಮಸ್ಥರಲ್ಲಿ ಆತಂಕ

29/07/2020

ಮಡಿಕೇರಿ ಜು.29 : ಬಳಸಲಾದ ಪಿಪಿಇ ಕಿಟ್ ಒಂದು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ- ಗುಡ್ಡೆಹೂಸೂರು ರಸ್ತೆಯ ಬದಿಯಲ್ಲಿ ಬುಧವಾರ ಕಂಡು ಬಂದಿದ್ದು, ಇದರಿಂದಾಗಿ ಹಾರಂಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಕಾವೇರಿ ನೀರಾವರಿ ನಿಗಮದ ಹಾರಂಗಿ ಪುನರ್ವಸತಿ ಕೇಂದ್ರದ ನೌಕರರು ಬೆಳಗ್ಗೆ ವಾಯು ವಿಹಾರಕ್ಕೆ ಹೋಗುವ ದಾರಿಯಲ್ಲಿ ಕಿಟ್ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಕೂಡಲೇ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಭಾಸ್ಕರ ನಾಯಕ್ ಅವರು ಪಂಚಾಯತಿ ಪೌರ ಕಾರ್ಮಿಕರೊಂದಿಗೆ ಸ್ಧಳಕ್ಕೆ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ಅದೇ ಜಾಗದಲ್ಲಿ ಕಿಟ್‍ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು.
ಈ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿ ಮತ್ತು ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ ನೋಡಲ್ ಅಧಿಕಾರಿ ವರದರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಭೇಟಿ ನೀಡಿ ಹಾರಂಗಿ ಗ್ರಾಮಸ್ಧರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಧೈರ್ಯ ತುಂಬಿದರು.