ಮಕ್ಕಂದೂರು ಬ್ಯಾಂಕ್ ದರೋಡೆಗೆ ಬಂದವರು ವಿದ್ಯುತ್, ಸಿಸಿ ಕ್ಯಾಮರಾ ಸಂಪರ್ಕ ಕಟ್ ಮಾಡಿದ್ರು

29/07/2020

ಮಡಿಕೇರಿ ಜು.29 : ಗೋಡೆ ಕೊರೆದು ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಮಕ್ಕಂದೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿಗಳು ಎಂದಿನಂತೆ ಬುಧವಾರ ಬ್ಯಾಂಕಿಗೆ ಆಗಮಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ದರೋಡೆ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಮಕ್ಕಂದೂರು ಕೆನರಾ ಬ್ಯಾಂಕ್‍ನ ಹಿಂಬದಿ ಗೋಡೆಯನ್ನು ಅಂದಾಜು 2 ಅಡಿಯಷ್ಟು ಅಗಲ ಕೊರೆದಿರುವ ಚೋರರು ಒಳನುಗ್ಗಿ ಸ್ಟ್ರಾಂಗ್ ರೂಂಗೆ ಪ್ರವೇಶಿಸಲು ಯತ್ನಿಸಿ ವಿಫಲರಾಗಿದ್ದಾರೆ. ಪೂರ್ವ ಯೋಜಿತವಾಗಿ ಸಂಚು ರೂಪಿಸಿರುವ ಚೋರರು ಗೋಡೆ ಕೊರೆಯುವ ಮೊದಲು ಬ್ಯಾಂಕ್‍ಗೆ ಕಲ್ಪಿಸಲಾಗಿದ್ದ ವಿದ್ಯುತ್ ಸಂಪರ್ಕದ ತಂತಿಯನ್ನು ಕತ್ತರಿಸಿದ್ದಾರೆ. ಬಳಿಕ ಬ್ಯಾಂಕ್ ನ ಗೋಡೆಗಳಿಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಬ್ಯಾಟರಿ ಮತ್ತು ಯುಪಿಎಸ್ ಲೈನ್‍ನ ಸಂಪರ್ಕವನ್ನು ಕೂಡ ತುಂಡರಿಸಿದ್ದಾರೆ.
ನಿರ್ಜನ ಪ್ರದೇಶದ ಹಿಂಬದಿಯ ಗೋಡೆಯನ್ನು ಕೊರೆದು ಸ್ಟ್ರಾಂಗ್ ರೂಂ ತೆರೆಯಲು ಸಾಧ್ಯವಾಗದೆ ಬಂದ ದಾರಿಗೆ ಸುಂಕವಿಲ್ಲವೆಂದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಬ್ಯಾಂಕ್ ನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್, ಠಾಣಾಧಿಕಾರಿ ಚಂದ್ರಶೇಖರ್, ಠಾಣೆಯ ಸಿಬ್ಬಂದಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ದರೋಡೆಗೆ ಬಳಸಿದ ಕಬ್ಬಿಣದ ಹಾರೆ ಹಾಗೂ ಮದ್ಯ ಸೇವಿಸಿ ಬಿಸಾಡಿದ್ದ ಮದ್ಯದ ಬಾಟಲಿಗಳು ಪ್ತತೆಯಾಗಿವೆ.
::: ಯಾವುದೇ ಆತಂಕ ಬೇಡ :::
ಬುಧವಾರ ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಹಿಂಬದಿಯ ಗೋಡೆ ಕೊರೆದು ಕಳ್ಳರು ಒಳನುಗ್ಗಿದಾರೆ. ಬ್ಯಾಂಕ್ ನಲ್ಲಿದ್ದ ಹಣ, ಕಾಗದ ಪತ್ರಗಳು ಸೇಫ್ ಆಗಿವೆ. ಗ್ರಾಹಕರು ಯಾವುದೇ ಭಯಪಡುವ ಅಗತ್ಯವಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.