ಕೊಡಗು ಜಿಲ್ಲೆಯಲ್ಲಿ RAPID TEST ಗೆ ಚಾಲನೆ

29/07/2020


ಮಡಿಕೇರಿ ಜು.29 : ಕೊಡಗು ಜಿಲ್ಲೆಯಲ್ಲಿ ದಿನೇದಿನೇ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ‘ಕೊರೋನಾ RAPID TEST ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು, ಬುಧವಾರ ಸೋಮವರಪೇಟೆ ತಾಲೂಕಿನ ತೊರೆನೂರು-ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಥಮ ತಪಾಸಣೆ ನಡೆಯಿತು.
ಜಿಲ್ಲಾ ಆರೋಗ್ಯ ಇಲಾಖೆಯ ಒಬ್ಬರು ವೈದ್ಯಾಧಿಕಾರಿ, ಶುಶ್ರೂಷಕರು ಸೇರಿದಂತೆ ಮೂರು ಮಂದಿಯ ತಂಡ ಎರಡು ಗ್ರಾ.ಪಂ.ಗಳ ವಿವಿಧ ಗ್ರಾಮಗಳಲ್ಲಿ ತಪಾಸಣೆ ನಡೆಸಿತು.
ಆರೋಗ್ಯ ಇಲಾಖೆಯ ನಿಯಮಗಳ ಅಡಿಯಲ್ಲಿ ಮಡಿಕೇರಿಯಿಂದ ಆಗಮಿಸಿದ ಈ ತಂಡ ಆಯಾ ಗ್ರಾಮದಲ್ಲಿ ಸೀಲ್‍ಡೌನ್ ಆದ ಪ್ರದೇಶದ ಸಮೀಪದ ಗ್ರಾಮಸ್ಧರ ತಪಾಸಣೆ ನಡೆಸಿ ಒಂದು ಗಂಟೆಯೊಳಗಾಗಿ ಸಂಬಂಧಿಸಿದವರಿಗೆ ತಪಾಸಣೆ ವರದಿಯನ್ನು ನೀಡಿತು.
ರ್ಯಾಪಿಡ್ ತಪಾಸಣಾ ತಂಡ ಬುಧವಾರ ಹುಲುಸೆಯಲ್ಲಿ 14 ಮಂದಿ, ತೊರೆನೂರಿನ 20 ಹಾಗೂ ಹೆಬ್ಬಾಲೆಯ 10 ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿರುವುದಾಗಿ ಹೇಳಲಾಗಿದೆ. ತಂಡದ ನೇತೃತ್ವವನ್ನು ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭರತ್ ವಹಿಸಿದ್ದು, ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿತ್ತು.