ಕೊಡಗಿನಲ್ಲಿ ಒಂದೇ ದಿನ 18 ಮಂದಿಯಲ್ಲಿ ಸೋಂಕು ಪತ್ತೆ

29/07/2020

ಮಡಿಕೇರಿ ಜು.29 : ಕೊಡಗು ಜಿಲ್ಲೆಯಲ್ಲಿ ಬುಧವಾರ ಸಂಜೆ ವೇಳೆಗೆ 18 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 375ಕ್ಕೆ ಏರಿಕೆಯಾಗಿದ್ದರೆ, 272 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬುಧವಾರ ಬೆಳಗ್ಗೆ 8.30ರ ವೇಳೆಗೆ ಜಿಲ್ಲೆಯಲ್ಲಿ 7 ಹೊಸ ಪ್ರಕರಣ ಪತ್ತೆಯಾಗಿದ್ದರೆ, ಮಧ್ಯಾಹ್ನದ ವೇಳೆಗೆ ಮತ್ತೆ ಐದು ಮಂದಿಯಲ್ಲಿ ಹಾಗೂ ಸಂಜೆ ವೇಳೆಗೆ ಇನ್ನೂ 6 ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಹಿಂಭಾಗದ 74 ವರ್ಷದ ವೃದ್ಧ ಹಾಗೂ 45 ವರ್ಷದ ಪುರುಷ, ಐಟಿಐ ಹಿಂಭಾಗದ 38 ವರ್ಷದ ಪುರುಷ, ಕರ್ಣಂಗೇರಿ ಗ್ರಾಮದ 32 ವರ್ಷದ ಪುರುಷ, ನಾಪೋಕ್ಲು ಬಳಿಯ ಎಮ್ಮೆಮಾಡುವಿನ 39 ವರ್ಷದ ಪುರುಷ, ಕಾರುಗುಂದ ಕಡಿಯತ್ತೂರಿನ 60 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ ವೀರಾಜಪೇಟೆಯ ಸಿದ್ಧಾಪುರದ 45 ವರ್ಷದ ಮಹಿಳೆ, 38 ವರ್ಷದ ಮಹಿಳೆ, 15 ಮತ್ತು 9 ವರ್ಷದ ಬಾಲಕರು, ಸೋಮವಾರಪೇಟೆ ತಾಲೂಕಿನ ಅಭ್ಯತ್‍ಮಂಗಲದ ಜ್ಯೋತಿನಗರದ 49 ವರ್ಷದ ಮಹಿಳೆ, ರಂಗಸಮುದ್ರದ ಬೆಟ್ಟಗೇರಿಯ 58 ವರ್ಷದ ಪುರುಷನಲ್ಲಿ ಸೋಮಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬುಧವಾರ ಸಂಜೆ ವೀರಾಜಪೇಟೆ ತಾಲೂಕಿನ ಕುಕ್ಲೂರು ಗ್ರಾಮದ 43 ವರ್ಷದ ಮಹಿಳೆ ಹಾಗೂ 15 ವರ್ಷದ ಬಾಲಕಿ, ಹಾಸನಕ್ಕೆ ಪ್ರಯಾಣಿಸಿರುವ ಇತಿಹಾಸ ಹೊಂದಿರುವ ಕಾಕೋಟುಪರಂಬುವಿನ 64 ವರ್ಷದ ಮಹಿಳೆ, ಬೇತ್ರಿಯ 35 ವರ್ಷದ ಮಹಿಳೆ, ಗೋಣಿಕೊಪ್ಪ ಚೆನ್ನಂಗೊಲ್ಲಿಯ 34 ವರ್ಷದ ಆರೋಗ್ಯ ಕಾರ್ಯಕರ್ತೆ, ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗುವ ಲಕ್ಷಣ ರಹಿತ ಪ್ರಕರಣದ ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರದ 48 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 374ರಷ್ಟಾಗಿದ್ದು, 272 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 96ಆಗಿದ್ದು, 6 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಹಿಂಭಾಗ, ಐಟಿಐ ಹಿಂಭಾಗ, ಕರ್ಣಂಗೇರಿ ಗ್ರಾಮದ 3ನೇ ಮೈಲು, ಎಮ್ಮೆಮಾಡು ಕೂರ್ಲಿ ಶಾಲೆ ಬಳಿ, ಕಡಿಯತ್ತೂರು, ರಂಗಸಮುದ್ರದ ಬೆಟ್ಟಗೇರಿ, ಗೋಣಿಕೊಪ್ಪದ ಚೆನ್ನಂಗೊಲ್ಲಿ, ಕಾಕೋಟುಪರಂಬು, ಬೇತ್ರಿ, ಚಿಕ್ಕಅಳುವಾರ ಗ್ರಾಮಗಳಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ. ಅಲ್ಲದೆ ವೀರಾಜಪೇಟೆಯ ಆರ್ಜಿ, ಗೋಣಿಕೊಪ್ಪದ ಅಚ್ಚಪ್ಪ ಲೇಔಟ್, ಕುಟ್ಟದ ಲಕ್ಕುಂದ, ಮಡಿಕೇರಿಯ ಮುನೀಶ್ವರ ದೇವಸ್ಥಾನ ಬಳಿ, ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆ, ಕುಶಾಲನಗರದ ಬೈಚನಹಳ್ಳಿಯ ಡೀಸೆಲ್ ಕೇರ್ ಮುಂಭಾಗದ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ 84 ನಿಯಂತ್ರಿತ ವಲಯಗಳಿವೆ ಎಂದು ಅವರು ವಿವರಿಸಿದ್ದಾರೆ.