ಮಡಿಕೇರಿ ಆಜಾದ್ ನಗರದ ಮಹಿಳೆ ಕೊರೋನಾ ಸೋಂಕಿಗೆ ಬಲಿ : ಸಾವಿನ ಸಂಖ್ಯೆ 8 ಕ್ಕೆ ಏರಿಕೆ

30/07/2020

ಮಡಿಕೇರಿ ಜು. 30 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಂದು ಸಾವು ಸಂಭವಿಸಿದ್ದು, ಜಿಲ್ಲೆಯಲ್ಲಿ ಕೋವಿಡ್ ಸಂಬಂಧದ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಮಡಿಕೇರಿ ನಗರದ ಅಜಾದ್ ನಗರದ ನಿವಾಸಿಯಾದ 54 ವರ್ಷದ ಮಹಿಳೆಯೊಬ್ಬರಿಗೆ ಕಳೆದ ಮೂರು ದಿನಗಳಿಂದ ಜ್ವರ ಇದ್ದು, ನಗರದ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಜು. 29 ರಂದು ರಾತ್ರಿ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡ ಕಾರಣ ರಾತ್ರಿ 07.30 ಗಂಟೆಗೆ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ತಕ್ಷಣ ಚಿಕಿತ್ಸೆ ನೀಡಿದರೂ ಸಹ ಫಲಕಾರಿಯಾಗದೆ ರಾತ್ರಿ 8.45 ಕ್ಕೆ ಮೃತರಾಗಿರುತ್ತಾರೆ.

ಅವರ ಗಂಟಲು ದ್ರವ ಮಾದರಿಯನ್ನು ಆಂಟಿಜೆನ್ ಕಿಟ್ ಮೂಲಕ ಪರೀಕ್ಷಿಸಲಾಗಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ.

ಜಿಲ್ಲೆಯಲ್ಲಿ ಸಂಭವಿಸಿದ 8 ಮೃತ ಪ್ರಕರಣಗಳ ಪೈಕಿ, 2 ಪ್ರಕರಣಗಳು ಕೋವಿಡ್ ಆಸ್ಪತ್ರೆಯ ಚಿಕಿತ್ಸಾ ನಿರ್ಧಾರ ಪ್ರದೇಶಕ್ಕೆ ಬಂದ ಒಂದರಿಂದ ಎರಡು ಗಂಟೆ ಅವಧಿಯಲ್ಲಿ ಸಂಭವಿಸಿರುತ್ತದೆ ಮತ್ತು 1 ಪ್ರಕರಣವು ಕೋವಿಡ್ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ಮೃತಪಟ್ಟ ಪ್ರಕರಣವಾಗಿರುತ್ತದೆ.

ಮೃತಪಟ್ಟ ಎಲ್ಲಾ ಪ್ರಕರಣಗಳಲ್ಲೂ ಉಸಿರಾಟದ ತೊಂದರೆಯಿದ್ದು, ಕೋವಿಡ್ ಆಸ್ಪತ್ರೆಗೆ ತಡವಾಗಿ ಬಂದ ಪ್ರಕರಣಗಳಾಗಿವೆ.

ಆದ್ದರಿಂದ ಉಸಿರಾಟದ ಸಮಸ್ಯೆ ಇರುವವರು ತಕ್ಷಣವೇ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗಲು ವಿನಂತಿಸಿದೆ.