ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ

30/07/2020

ಬೆಂಗಳೂರು ಜು.30 : ಕೋವಿಡ್-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲ ವಿಷಯಗಳ ವೈಜ್ಞಾನಿಕ ಪಠ್ಯ ಕಡಿತಕ್ಕೆ ಮುಂದಾಗಿದ್ದು, ಇನ್ನೂ ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.
ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಪಠ್ಯಕ್ರಮದಲ್ಲಿ ಶೇ. 30ರಷ್ಟು ಕಡಿತಗೊಳಿಸುವ ಪ್ರಸ್ತಾವನೆ ಇಲ್ಲ. ಪಠ್ಯದಲ್ಲಿ ಜೀಸರ್, ಪ್ರವಾದಿ ಮೊಹಮದ್, ಹೈದರಾಲಿ, ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪಠ್ಯಗಳನ್ನು ಕಡಿತ ಮಾಡಿಲ್ಲ. 2020-21ನೇ ಸಾಲಿನ ಶೈಕ್ಷಣಿಕ ಪಠ್ಯಕ್ರಮಗಳ ತಯಾರಿಯ ಕರಡು ಪ್ರತಿ ಇದಾಗಿದ್ದು, ಇದಿನ್ನೂ ಅಂತಿಮಗೊಳಿಸಿಲ್ಲ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ವಿವರಿಸಿದರು.
ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹಾಗೂ ವಿಪಕ್ಷ ನಾಯಕರ ಟ್ವೀಟ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಶೈಕ್ಷಣಿಕ ವರ್ಷ ಪ್ರಾರಂಭವಾಗದಿರುವುದರಿಂದ ನಮಗೆ ಎಷ್ಟು ದಿನಗಳು ದೊರೆಯುತ್ತವೆಂಬುದು ಇನ್ನೂ ಅಸ್ಪಷ್ಟವಾಗಿರುವುದರಿಂದ ಸಿಲೆಬಸ್‍ನ್ನು ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಲಭ್ಯ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುವುದು. ಪಠ್ಯ ಕಡಿತವು ವೈಜ್ಞಾನಿಕವಾಗಿರಲಿದ್ದು, ಯಾವುದೇ ಪಠ್ಯವನ್ನು ಅನಗತ್ಯವಾಗಿ ಕಡಿತ ಮಾಡುವುದಿಲ್ಲ. ಹಾಗಾಗಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ.