ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ

30/07/2020

ನವದೆಹಲಿ ಜು.30 : ಶಾಲಾ ದಾಖಲಾತಿ ಹೆಚ್ಚಳ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ರೂಪಿಸಿರುವ ಬಹುನಿರೀಕ್ಷಿತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‍ಪೋಕ್ರಿಯಾಲ್‍ನಿಶಾಂಕ್‍ಕೂಡ ಉಪಸ್ಥಿತರಿದ್ದರು.
ಸಚಿವ ಸಂಪುಟ ತೀರ್ಮಾನಗಳ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ, ರಾಷ್ಟ್ರೀಯ ಶಿಕ್ಷಣ ನೀತಿ ಬಹು-ವಿಷಯಗಳ ಶಿಕ್ಷಣವನ್ನು ಉತ್ತೇಜಿಸುತ್ತದೆ ಮತ್ತು ಐದು ವರ್ಷದ ಪದವಿ / ಸ್ನಾತಕೋತ್ತರ ಕೋರ್ಸ್ ಅನ್ನು ಸಂಯೋಜಿಸುತ್ತದೆ ಎಂದು ಹೇಳಿದ್ದಾರೆ
ಅಲ್ಲದೆ, ಇ-ಕೋರ್ಸ್‍ಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು, ವರ್ಚುಯಲ್ ಪ್ರಯೋಗಾಲಯಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (ಎನ್‍ಇಟಿಎಫ್) ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ..
ಗಮನಾರ್ಹವಾಗಿ, ಹೊಸ ಶಿಕ್ಷಣ ನೀತಿಯ ರಚಿಸುವುದು ಮತ್ತು ಅದನ್ನು ಅಂತಿಮಗೊಳಿಸುವ ಪ್ರಕ್ರಿಯೆಗೆ ಹಿಂದಿನ ಮೋದಿ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಚಾಲನೆ ನೀಡಿದ್ದರು. ಈ ನೀತಿಯನ್ನು ಅಂತಿಮಗೊಳಿಸಿ, ಅನುಮೋದನೆ ಪಡೆಯಲು ಆರು ವರ್ಷಗಳು ಬೇಕಾಯಿತು.
ಮೊದಲು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹೊಸ ಶಿಕ್ಷಣ ನೀತಿ ರೂಪಿಸಿದ್ದರು. ನಂತರ ದೇಶದ ಶಿಕ್ಷಣ ವಲಯದಲ್ಲಿ ಬದಲಾವಣೆಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನೀತಿ ರಚಿಸಿತು.