ರುಚಿಕರವಾದ ಎಗ್ ಬುರ್ಜಿ ಮಾಡುವ ವಿಧಾನ

30/07/2020

ಬೇಕಾಗುವ ಸಾಮಾಗ್ರಿಗಳು: ಮೊಟ್ಟೆ 8, ಮೆಂತೆ 1 ಚಮಚ, ಈರುಳ್ಳಿ 2-3(ಚಿಕ್ಕದಾಗಿ ಕತ್ತರಿಸಿದ್ದು), ಕರಿಬೇವಿನ ಎಲೆ ಸ್ವಲ್ಪ, ಟೊಮೆಟೊ 2 (ಕತ್ತರಿಸಿದ್ದು), ಹಸಿಮೆಣಸಿನ ಕಾಯಿ 1 (ಚಿಕ್ಕದಾಗಿ ಕತ್ತರಿಸಿದ್ದು), ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಒಂದೊಂದು ಚಮಚ, ಅರಿಶಿಣ ಪುಡಿ 1 ಚಮಚ, ಕೆಂಪು ಮೆಣಸಿನ ಪುಡಿ 1 ಚಮಚ, ನಿಂಬೆ ರಸ ಅರ್ಧ ಚಮಚ, ಕರಿಮೆಣಸಿನ ಪುಡಿ 1 ಚಮಚ, ಎಣ್ಣೆ, ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ: ಮೊಟ್ಟೆಗಳನ್ನು ಒಡೆದು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕದಡಬೇಕು. ನಂತರ ಪಾತ್ರೆಯನ್ನು ಉರಿಯಲ್ಲಿಟ್ಟು ಇಟ್ಟು ಅದರಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಮೆಂತೆ, ಕರಿಬೇವಿನ ಎಲೆ ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಟೊಮಟೊ ಸೇರಿಸಿ ಮೆತ್ತಗಾಗುವವರೆಗೆ ಬಿಸಿ ಮಾಡಿ, ಅದಕ್ಕೆ ಅರಿಶಿಣ ಪುಡಿ, ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಕರಿಮೆಣಸಿನ ಪುಡಿ, ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್, ಉಪ್ಪು ಹಾಕಿ ಈಗ ಚೆನ್ನಾಗಿ ಕದಡಿದ ಮೊಟ್ಟೆಯನ್ನು ಹಾಕಿ ಸೌಟ್ ನಿಂದ ಆಡಿಸುತ್ತಾ ಇರಬೇಕು. ಆಗ ಮೊಟ್ಟೆ ಬೆಂದು ಪುಡಿ-ಪುಡಿ ರೀತಿಯಲ್ಲಿ ಆಗುವುದು. ನಂತರ ಉರಿಯಿಂದ ತೆಗೆದು ಸ್ವಲ್ಪ ನಿಂಬೆ ರಸ ಹಿಂಡಿದರೆ ರುಚಿಕರವಾದ ಮೊಟ್ಟೆ ಬುರ್ಜಿ ರೆಡಿ.