ಪ್ರವಾಸಿಗರ ಆಕರ್ಷಣೆಯ ತಾಣ ಮುತ್ಯಾಲಮಡುವು

30/07/2020

ಮುತ್ಯಾಲಮಡುವು ಕಣಿವೆ ಹಸಿರಿನಿಂದ ಶೋಭಿಸುತ್ತಿದ್ದು ಜೀವಕಳೆ ತುಂಬಿದೆ. ಹಸಿರಿಗೆ ಕಳಶವಿಟ್ಟಂತೆ ಜಲಪಾತದಲ್ಲಿ ಮುತ್ತಿನಂತೆ ಧುಮುಕುತ್ತಿದ್ದ ನೀರು ಮಳೆಯಿಂದಾಗಿ ಭೋರ್ಗರೆಯುತ್ತಿದ್ದು ಪ್ರವಾಸಿಗರು ನೀರಿನಲ್ಲಿ ಮಿಂದೇಳುತ್ತಿದ್ದಾರೆ. ಮುತ್ಯಾಲಮಡುವಿನ ಹಸಿರಿನ ಪ್ರಕೃತಿ ಸೌಂದರ್ಯವನ್ನು ನೋಡುವುದೇ ಒಂದು ಆನಂದ. ಜುಳುಜುಳು ಹರಿಯುವ ನೀರಿನ ನಿನಾದವನ್ನು ಆಲಿಸುತ್ತಾ ಹಸಿರಿನ ನಡುವೆ 400ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಇಳಿದು ಕಣಿವೆಯನ್ನು ತಲುಪಿದರೆ ಆಯಾಸ ಮರೆಯಾಗಿ ಆನಂದ ಉಂಟಾಗುತ್ತದೆ. 300ಅಡಿಗಳಿಗೂ ಎತ್ತರದಿಂದ ಮುತ್ತಿನೋಪಾದಿಯಲ್ಲಿ ಕಣಿವೆಯತ್ತ ಧುಮುಕುವ ನೀರಿನ ಜರಿ ಕೈಬೀಸಿ ಕರೆಯುತ್ತದೆ.

ಮುತ್ಯಾಲಮಡುವಿನಲ್ಲಿ ನೀರು ಮುತ್ತಿನಂತೆ ಧುಮುಕುವುದರಿಂದ ಈ ಜಲಪಾತಕ್ಕೆ ಮುತ್ಯಾಲಮಡುವು ಎಂದು ಹೆಸರು ಬಂದಿದೆ. ಕಣಿವೆಯ ಮೇಲಿನ ಮೆಟ್ಟಿಲುಗಳನ್ನು ಇಳಿಯಬೇಕಾದರೆ ಆಯಾಸವೆನಿಸುತ್ತದೆ. ಆದರೆ ಜುಳುಜುಳು ನೀರು ಪನ್ನೀರಿನ ಮುತ್ತಿನಂತೆ ಚಿಮ್ಮುವ ನೀರಿನ ಹನಿಗಳು ಆಯಾಸವನ್ನು ಮರೆಸಿ ಪ್ರವಾಸಿಗರಲ್ಲಿ ಉತ್ಸಾಹವನ್ನು ಮೂಡಿಸುತ್ತದೆ.

ಕಾಲಿನಲ್ಲಿ ಕಸುವುಳ್ಳವರು ಚಾರಣದಂತೆ ಮುತ್ಯಾಲಮಡುವಿನ ಬೆಟ್ಟವನ್ನು ಏರುವ ಪ್ರಯತ್ನವನ್ನು ಮಾಡುತ್ತಿದ್ದುದ್ದು ಕಂಡು ಬಂದಿತು. ಆಸಕ್ತಿ ಇರುವವರು ಕಣಿವೆಯಿಂದ ಕೆಲ ದೂರ ಅರಣ್ಯದಲ್ಲಿ ನಡೆದರೆ ಶಂಕುಚಕ್ರ ಜಲಪಾತವರೆಗೂ ಸಾಗಬಹುದು. ಒಂದು ಕಿ.ಮೀ.ಗೂ ಹೆಚ್ಚಿನ ದೂರ ಕಾಡಿನ ಮಧ್ಯೆ ನಡೆದು ಹೋಗುವುದು ಅದ್ಭುತ ಅನುಭವನ್ನು ಕಟ್ಟಿಕೊಡುತ್ತದೆ.

ಮುತ್ಯಾಲಮಡುವಿನ ಮೇಲ್ಭಾಗದಲ್ಲಿ ಮಯೂರ ಹೋಟೆಲ್ ಪಕ್ಕದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂನಲ್ಲಿ ಮಳೆಯಿಂದಾಗಿ ನೀರು ಭರ್ತಿಯಾಗಿದೆ. ಚೆಕ್ ಡ್ಯಾಂ ತುಂಬಿದ ನಂತರ ನೀರು ಕಣಿವೆಯತ್ತ ಸಾಗುತ್ತದೆ. ಹಾಗಾಗಿ ಕಣಿವೆಯಲ್ಲಿ ನೀರು ಮೇಲಿಂದ ಭೋರ್ಗರೆಯುತ್ತಾ ಜಲಪಾತದಂತೆ ಧುಮುಕುತ್ತಿದೆ. ಹಲವು ವರ್ಷಗಳಿಂದ ಕಣ್ಮರೆಯಾಗಿದ್ದ ನೀರಿನ ಜಲಪಾತ ತನ್ನ ವೈಭವವನ್ನು ಮರಳಿ ಪಡೆದಿದ್ದು ಪ್ರವಾಸಿಗರು ಭೇಟಿ ನೀಡಿದರೆ ಇಲ್ಲಿಯ ತಂಪನೆಯ ವಾತಾವರಣ ಹಾಗೂ ಜಲಪಾತ ಮನಸ್ಸಿಗೆ ಮುದ ನೀಡುತ್ತದೆ.

ಚೆಕ್‌ಡ್ಯಾಂನಲ್ಲಿ ನೀರು ತುಂಬಿರುವುದರಿಂದ ಬೋಟಿಂಗ್ ಪ್ರಾರಂಭಿಸಿದ್ದು ಯುವಕರು, ಮಕ್ಕಳಿಗೆ ಖುಷಿಯ ಅನುಭವ ನೀಡುತ್ತದೆ.

ಬೆಂಗಳೂರಿನಿಂದ ೪೦ಕಿ.ಮೀ. ದೂರದಲ್ಲಿರುವ ಮುತ್ಯಾಲಮಡುವಿಗೆ ಭೇಟಿ ನೀಡಲು ಸುಸಜ್ಜಿತವಾದ ರಸ್ತೆಯಿದೆ. ಆದರೆ ಬಸ್ ಸೌಕರ್ಯ ಇಲ್ಲ. ಸ್ವಂತ ವಾಹನಗಳಲ್ಲಿ ಬರಬಹುದು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಹಾಗೂ ವಸತಿ ಗೃಹಗಳು ಇಲ್ಲಿವೆ. ಒಂದು ದಿನದ ಹೊರ ಸಂಚಾರವನ್ನು ಸಂತಸದಿಂದ ಕಳೆಯಲು ಪ್ರಶಸ್ತ ಸ್ಥಳವಾಗಿದೆ. ಮಳೆ ಹಾಗೂ ಮೋಡದ ಈ ವಾತಾವರಣ ಮುತ್ಯಾಲಮಡುವು ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ. ಜೊತೆಗೆ ಭೋರ್ಗರೆಯುವ ಜಲಪಾತ ಮುತ್ತಿನ ನೀರಿನ ಹನಿಗಳ ಸಿಂಚನ ಪ್ರವಾಸಿಗರನ್ನು ವಾರಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದು ಶನಿವಾರ ಭಾನುವಾರಗಳು ಜನಜಂಗುಳಿ ಜಮಾಯಿಸುತ್ತಿದೆ. ಹಲವು ವರ್ಷಗಳ ನಂತರ ಮುತ್ಯಾಲಮಡುವು ಮೈದುಂಬಿದ್ದು ಪ್ರವಾಸಿಗರ ಆಕರ್ಷಣೆಯಾಗಿದೆ.