ಕಾರ್ಯಾಚರಣೆಗೆ ಮಳೆಯೇ ಇಲ್ಲ : ಎನ್.ಡಿ.ಆರ್.ಎಫ್ ತಂಡಕ್ಕೆ ಯೋಗವೇ ಎಲ್ಲ

ಮಡಿಕೇರಿ ಜು.30 : ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಕೆಲವು ದಿನಗಳಿಂದ ಮಳೆ ದೂರವಾಗಿದ್ದು, ಮಳೆಗಿಂತ ಕೊರೊನಾ ಭಯ ಕಾಡುತ್ತಿದೆ. ಪ್ರಾಕೃತಿಕ ವಿಕೋಪದ ಕಾರ್ಯಾಚರಣೆಗಾಗಿ ಬಂದಿರುವ ಎನ್.ಡಿ.ಆರ್.ಎಫ್ ಯೋಧರು ಈಗ ತಮ್ಮ ಆರೋಗ್ಯ ರಕ್ಷಣೆಗಾಗಿ ಯೋಗಕ್ಕೆ ಮೊರೆ ಹೋಗಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ದಿನವೂ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ಜನರ ಜೀವ ರಕ್ಷಣೆಗಾಗಿ ಪೂರ್ವ ಸಿದ್ದತೆಯಾಗಿ ಎನ್.ಡಿ.ಆರ್.ಎಫ್ ಯೋಧರ ತಂಡವನ್ನು ನಿಯೋಜಿಸಲಾಗಿದೆ.
ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಬೀಡು ಬಿಟ್ಟಿರುವ ಸಿಬ್ಬಂದಿಗಳು ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ. ಪ್ರತಿ ದಿನ ಬೆಳಗ್ಗೆ ತಂಡದ ಕಾರ್ಯ ಚಟುವಟಿಕೆಗಳ ಜೊತೆಯಲ್ಲಿ ದೈಹಿಕ ಕ್ಷಮತೆ ಹೆಚ್ಚಿಸುವ ವ್ಯಾಯಾಮ, ಪ್ರಾಣಯಾಮ, ಯೋಗಾಸನದಂತಹ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಕ್ಕೆ ಆಗಮಿಸಿರುವ ಯೋಧರ ತಂಡ ಕೊರೊನಾದಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ನೀಡುತ್ತಿದೆ. ಬಳಿಕ ವಿವಿಧ ರಕ್ಷಣಾ ಪರಿಕರಗಳ ಸುಸ್ಥಿಯ ಬಗ್ಗೆಯೂ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಾಂಡೆಂಟ್ ಆರ್.ಕೆ. ಉಪಾಧ್ಯಾಯ, ಮಾನ್ಸೂನ್ ಪೂರ್ವದಲ್ಲಿ ನಮ್ಮ ತಂಡವನ್ನು ಜಿಲ್ಲೆಯಲ್ಲಿ ನಿಯೋಜನೆ ಮಾಡಿದ್ದು, ಭೂ ಕುಸಿತ, ಪ್ರವಾಹ ಮತ್ತಿತ್ತರ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಎಲ್ಲಾ ರೀತಿಯ ತಯಾರಿ ನಡೆದಿದೆ. ಇದೀಗ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ರಕ್ಷಣಾ ಯೋಧರಿಗೆ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸುವ ಯೋಗಾ, ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ. ಇದರಿಂದ ಕೊರೊನಾದಿಂದ ರಕ್ಷಣೆ ಮಾಡಿಕೊಳ್ಳಬಹುದು. ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಯೂ ಇದರಿಂದ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
