ಕುಶಾಲನಗರದಲ್ಲಿ ವಿವಾದಿತ ಬಡಾವಣೆ ನಿರ್ಮಾಣ : ಕ್ರಮಕ್ಕೆ ಮುಂದಾಗದ ಜಿಲ್ಲಾಡಳಿತ : ವಿ.ಪಿ. ಶಶಿಧರ್ ಅಸಮಾಧಾನ

ಮಡಿಕೇರಿ ಜು. 30 : ಕುಶಾಲನಗರ ಬೈಚನಹಳ್ಳಿಯ ಬಳಿ ಮುಖ್ಯರಸ್ತೆ ಒತ್ತಿನಲ್ಲಿ ಅಗತ್ಯ ಅನುಮೋದನೆ ಪಡೆಯದೆ ನಿರ್ಮಾಣವಾಗುತ್ತಿರುವ ವಿವಾದಿತ ಬಡಾವಣೆಯ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಸ್ಪಂದನೆ ತೋರದಿರುವ ಬಗ್ಗೆ ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ಅನುಮೋದನೆ ಪಡೆಯದೆ ನಿರ್ಮಾಣವಾಗುತ್ತಿರುವ ಬಡಾವಣೆ ಬಗ್ಗೆ ಜನಪ್ರತಿನಿಧಿಗಳು, ಜಿಪಂ ಮಾಜಿ ಅಧ್ಯಕ್ಷರು, ವಿವಿಧ ಪಕ್ಷಗಳ ಮುಖಂಡರು, ಸಂಘಟನೆಗಳ ಪ್ರಮುಖರು ವಿರೋಧ ವ್ಯಕ್ತಪಡಿಸಿದರೂ ಕಾಣದ ಕೈಗಳ ಪ್ರಭಾವದಿಂದ ಬಡಾವಣೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದಿದ್ದಾರೆ.
ಬಡಾವಣೆಯಲ್ಲಿ ಸಾರ್ವಜನಿಕ ಬಳಕೆಗೆ ಜಾಗ ಮೀಸಲಿಡದೆ ನಿಯಮಬಾಹಿರ ಬಡಾವಣೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಸೇರಿದಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ಕೂಡ ತರಲಾಗಿತ್ತು. ಈ ಬಗ್ಗೆ ತನಿಖಾ ಸಮಿತಿ ರಚಿಸಿ ಪರಿಶೀಲನೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರೂ ಕೂಡ ಅದು ಇದುವರೆಗೆ ಕಾರ್ಯಗತಗೊಂಡಿಲ್ಲ ಎಂದಿದ್ದಾರೆ. ಈ ಅಕ್ರಮದ ವಿರುದ್ಧ ಯಾವ ಅಧಿಕಾರಿಗಳು ಕೂಡ ಗಮನಹರಿಸದೆ ಇರುವುದು ವಿಪರ್ಯಾಸ ಎಂದ ಶಶಿಧರ್, ಈ ಬಗ್ಗೆ ಕ್ಷೇತ್ರದ ಶಾಸಕರು ಗಮನಹರಿಸುವಂತೆ ಆಗ್ರಹಿಸಿದ್ದಾರೆ.
ಗೋಷ್ಠಿಯಲ್ಲಿ ಪಪಂ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಎಂ.ಬಿ.ಸುರೇಶ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ಸ್ಥಳೀಯರಾದ ವೆಂಕಟೇಶ್ ಪೂಜಾರಿ, ಶಬ್ಬೀರ್ ಇದ್ದರು.
