ನೈಜ ಸಂತ್ರಸ್ತರಿಗೆ ಮನೆ ನೀಡಲು ಒತ್ತಾಯ

30/07/2020

ಮಡಿಕೇರಿ ಜು.30 : ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡ ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಮೂವತ್ತೊಕ್ಲು ಗ್ರಾಮದ ನೈಜ ಸಂತ್ರಸ್ತರಿಗೆ ಮನೆ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರಜಾ ಪರಿವರ್ತನಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಸ್.ಮುತ್ತಪ್ಪ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂವತ್ತೊಕ್ಲು ಗ್ರಾಮದ ಖಾಯಂ ನಿವಾಸಿಗಳಾದ ಎಂ.ಕೆ.ತಿಮ್ಮಯ್ಯ, ಎಂ.ಜಿ.ಪೊನ್ನಪ್ಪ, ಎಂ.ಬಿ.ರೇಷ್ಮ, ಎಂ.ಎ.ಕುಟ್ಟಪ್ಪ, ಎಂ.ಕೆ..ಗಂಗಮ್ಮ, ಎಂ.ಎ.ಚಂಗಪ್ಪ, ಎಂ.ಡಿ.ಕಾರ್ಯಪ್ಪ ಎಂಬುವವರುಗಳ ಮನೆಗಳಿಗೆ 2018ನೇ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಾನಿ ಉಂಟಾಗಿತ್ತು.
ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ನೀಡಿದ್ದರು. ಅಲ್ಲದೇ ನಿವೇಶನ ಪಟ್ಟಿಯಲ್ಲಿ ಅರ್ಹ ಫಲಾನುಭವಿಗಳ ಹೆಸರುಗಳನ್ನು ಸೇರಿದಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಅಂದಿನ ಜಿಲ್ಲಾಧಿಕಾರಿಗಳು ವರ್ಗಾವಣೆಯಾದ ನಂತರ ರಾಜಕೀಯದ ಕಾಣದ ಕೈಗಳು ತಡೆಯೊಡ್ಡಿವೆ ಎಂದು ಆರೋಪಿಸಿದರು.
ನೈಜ ಸಂತ್ರಸ್ತರು ವಾಸಿಸುತ್ತಿರುವ ಮನೆಗಳು ಅಪಾಯದಂಚಿನಲ್ಲಿದ್ದು, ಮಳೆಗಾಲದ ಸಹಜ ಆತಂಕ ಎದುರಾಗಿದೆ. ಇದೀಗ ಇವರುಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಬಾಡಿಗೆ ಹಣ ನೀಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನೊಂದ ಕುಟುಂಬಗಳಿಗೆ ಮತ್ತಷ್ಟು ಸಂಕಷ್ಟಗಳು ಎದುರಾದರೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಮುತ್ತಪ್ಪ ಎಚ್ಚರಿಕೆ ನೀಡಿದರು.
ಪ್ರಸ್ತುತ ಮನೆ ಹಂಚಿಕೆ ಬಗ್ಗೆ ಸಂಶಯ ಮೂಡಿದ್ದು, ಸಂತ್ರಸ್ತರ ಪಟ್ಟಿಯನ್ನು ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ನೊಂದಿರುವ ನೈಜ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ನೂತನ ಮನೆಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಮುಂದಿನ 15 ದಿನಗಳೊಳಗೆ ಜಿಲ್ಲಾಧಿಕಾರಿಗಳು ಮೂವತ್ತೊಕ್ಲು ಗ್ರಾಮದ ಖಾಯಂ ನಿವಾಸಿಗಳಿಗೆ ಆಶ್ರಯ ಕಲ್ಪಿಸುವ ಭರವಸೆ ನೀಡದಿದ್ದಲ್ಲಿ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಮುತ್ತಪ್ಪ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಮುಖಂಡ ಕೆ.ಕೆ.ಜಯಂತಿ, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಎಂ.ಶಾರದ, ಗ್ರಾಮಸ್ಥರಾದ ಎಂ.ಟಿ.ಚಿಣ್ಣಪ್ಪ ಹಾಗೂ ವನಿತಾ ಕಾರ್ಯಪ್ಪ ಉಪಸ್ಥಿತರಿದ್ದರು.