ವಿರಾಜಪೇಟೆ ಪ.ಪಂ ‘ಭ್ರಷ್ಟಾಚಾರದ ಕೂಪ’ವಾಗಿದೆ : ನಾಗರಿಕ ಸಮಿತಿ ಆರೋಪ

30/07/2020

ಮಡಿಕೇರಿ ಜು.30 : ಪಟ್ಟಣದ ಮೂಲಭೂತ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸದ ವಿರಾಜಪೇಟೆ ಪ.ಪಂ ‘ಭ್ರಷ್ಟಾಚಾರದ ಕೂಪ’ವಾಗಿ ಪರಿವರ್ತನೆಯಾಗಿದೆ ಎಂದು ಆರೋಪಿಸಿರುವ ವಿರಾಜಪೇಟೆ ನಾಗರಿಕ ಸಮಿತಿ ಅವ್ಯವಸ್ಥೆಗಳ ವಿರುದ್ಧ ನಿರಂತರವಾಗಿ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಡಾ.ಐ.ಆರ್.ದುರ್ಗಾಪ್ರಸಾದ್ ಅವರು, ಪಟ್ಟಣದ ನಾಗರಿಕರು ಎದುರಿಸುತ್ತಿರುವ ಕುಡಿಯುವ ನೀರು, ರಸ್ತೆ, ಚರಂಡಿ, ಸಂಚಾರ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿಗಳು, ಮುಖ್ಯಾಧಿಕಾರಿಗಳು ಗಮನಹರಿಸಿ ಬಗೆಹರಿಸುವ ಪ್ರಯತ್ನಗಳನ್ನು ನಡೆಸುತ್ತಿಲ್ಲ. ಪಟ್ಟಣ ಪಂಚಾಯ್ತಿಯಲ್ಲಿ ಲಂಚವಿಲ್ಲದೆ ಕೆಲಸವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸಮಿತಿ ಸದಸ್ಯ ಸೋಮ ಲೋಕನಾಥ್ ಮಾತನಾಡಿ, 2018 ಮತ್ತು 19ನೇ ಸಾಲಿನ ಪ್ರಾಕೃತಿಕ ವಿಕೋಪದ ಸಂದರ್ಭ ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು, ಇದನ್ನು ಪಟ್ಟಿಮಾಡಿ ಪರಿಹಾರವನ್ನು ವಿತರಿಸಲಾಗಿದೆ. ಇದರ ಪುನರ್ ಪರಿಶೀಲನೆಯ ಹಂತದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಕೆÉೀವಲ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡ, ಅಲ್ಪ ಪ್ರಮಾಣದ ಗೋಡೆ ಕುಸಿತದಂತಹ ಪ್ರಕರಣಗಳಲ್ಲಿ ಶೇ.70 ರಿಂದ ಶೇ.100 ಹಾನಿಯಾಗಿದೆ ಎಂದು ನಮೂದಿಸಿ ಪರಿಹಾರವನ್ನು ನೀಡಲಾಗಿದೆ ಎಂದು ಟೀಕಿಸಿದರು.
ಯೋಗ್ಯ ವಾಸದ ಮನೆ ಇರುವವರಿಗೂ ಹಾನಿಯೆಂದು 50 ಸಾವಿರ ರೂ. ಪರಿಹಾರ ನೀಡಿರುವ ಪ್ರಕರಣಗಳು ನಡೆದಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಖುದ್ದು ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ ಸೋಮ ಲೋಕನಾಥ್ ಅವರು, ಪ್ರಾಕೃತಿಕ ವಿಕೋಪದ ಹಾನಿ ಮತ್ತು ಪರಿಹಾರ ನೀಡಿಕೆಯ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.
ಸಮಿತಿ ಸದಸ್ಯ ಎಲ್.ಜಿ.ಅಶೋಕ್ ಮಾತನಾಡಿ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣದ ನೆಹರು ನಗರದಲ್ಲಿರುವ ಸಾರ್ವಜನಿಕ ಬಾವಿಯನ್ನು ಶುಚಿಗೊಳಿಸಿ ಎನ್ನುವ ಮನವಿಗೂ ಪ.ಪಂ ಕಿವಿಗೊಡದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯೆ ಅನಿತಾ ತೆರೇಸಾ ಲೋಬೋ ಮಾತನಾಡಿ, ವಿರಾಜಪೇಟೆ ನಗರದಂಚಿನ ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಕಸವನ್ನು ಸುರಿದು ಹೋಗುತ್ತಿದ್ದು, ಈ ಬಗ್ಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲ. ಈ ವ್ಯಾಪ್ತಿಯಲ್ಲಿ ಕನಿಷ್ಟ ಬೀದಿ ದೀಪಗಳೂ ಇಲ್ಲದೆ ನಿವಾಸಿಗಳು ಪರದಾಡುವಂತ್ತಾಗಿದೆ ಎಂದರು.
ಸದಸ್ಯ ನೆಲ್ಲಮಕ್ಕಡ ಗಣಪತಿ ಮಾತನಾಡಿ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ನಿವಾಸಿ ನೆಲ್ಲಮಕ್ಕಡ ಪ್ರಭು ಎಂಬವರು ತಮ್ಮ ಆಸ್ತಿಯ ಖಾತೆ ವರ್ಗಾವಣೆಗಾಗಿ ಕೇಳಿದ ಎಲ್ಲಾ ದಾಖಲೆಗಳೊಂದಿಗೆ ಪಂಚಾಯ್ತಿ ಕಛೇರಿಗೆ ಅರ್ಜಿ ಸಲ್ಲಿಸಿ ಏಳು ತಿಂಗಳು ಕಳೆದಿದೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿಯ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹಮಾನ್ ಮಾತನಾಡಿ, ವಿರಾಜಪೇಟೆಯ ಮುಖ್ಯ ಬೀದಿಯಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಗಳಿಲ್ಲ. ಇರುವ ನಿಲುಗಡೆ ಸ್ಥಳಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಕೆಲವೆಡೆಗಳ ತಗ್ಗು ಪ್ರದೇಶದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ವಾಹನಗಳ ನಿಲುಗಡೆ ಮಾಡುವುದು ಅಸಾಧ್ಯವಾಗಿದೆ ಎಂದು ಪಟ್ಟಣ ಪಂಚಾಯ್ತಿಯ ಕ್ರಮಗಳನ್ನು ಟೀಕಿಸಿದರು.
ಸಾಕಷ್ಟು ವಾಣಿಜ್ಯ ಮಳಿಗೆಗಳಲ್ಲಿ, ವಾಹನ ನಿಲುಗಡೆಗೆಂದು ಮೀಸಲಿಟ್ಟ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಿ ದುರುಪಯೋಗ ಮಾಡಲಾಗಿದೆ. ಇದರಿಂದಲೇ ಪಟ್ಟಣ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಂಗಡಿಗಳಿಗೆ ಪಟ್ಟಣ ಪಂಚಾಯ್ತಿಯೆ ಪರವಾನಗಿ ನೀಡುತ್ತಿದೆ ಎಂದು ಆರೋಪಿಸಿದರು.