ಜಿ.ಪಂ.ಸಾಮಾನ್ಯ ಸಭೆ : ತಾಲ್ಲೂಕು ಕೇಂದ್ರಗಳಲ್ಲಿಯೂ ಕೋವಿಡ್ ಪ್ರಯೋಗಾಲಯ ಆರಂಭಿಸಲು ನಿರ್ಣಯ

30/07/2020

ಮಡಿಕೇರಿ ಜು.30 : ಜಿಲ್ಲೆಯಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೋವಿಡ್ ಪ್ರಯೋಗಾಲಯವನ್ನು ತಾಲ್ಲೂಕು ಕೇಂದ್ರಗಳಲ್ಲಿಯೂ ತೆರೆದು ಪರೀಕ್ಷೆ ಆರಂಭಿಸುವಂತಾಗಬೇಕು ಎಂಬ ನಿರ್ಣಯವನ್ನು ಜಿ.ಪಂ.ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.
ನಗರದ ಜಿ.ಪಂ.ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೋವಿಡ್-19 ನಿಯಂತ್ರಣ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಸದಸ್ಯರಾದ ಶಿವುಮಾದಪ್ಪ ಅವರು ಜಿಲ್ಲೆಯಲ್ಲಿ ಕೋವಿಡ್-19 ಹೆಚ್ಚುತ್ತಿದ್ದು, ಈ ಸೋಂಕನ್ನು ನಿಯಂತ್ರಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿನ ಕುಂದುಕೊರತೆ ಬೆಳಕು ಚೆಲ್ಲಬೇಕಿದೆ. ಜೊತೆಗೆ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ವಿಷಯ ಪ್ರಸ್ತಾಪಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಸಹ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಪರೀಕ್ಷಾ ವರದಿಗೆ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಸಮುದಾಯ ಆಸ್ಪತ್ರೆಗಳಿಗೆ ವೈದ್ಯರನ್ನು ಹೊರಗುತ್ತಿಗೆಯಡಿ ನಿಯೋಜಿಸಲಾಗುತ್ತಿದೆ. ಈಗಾಗಲೇ ಆಯುಷ್ ವೈದ್ಯರನ್ನು ನಿಯೋಜಿಸಲಾಗಿದೆ ಎಂದರು.
ಕೊರೊನಾ ಪರೀಕ್ಷಾ ವರದಿಯು ಆಯಾಯ ದಿನವೇ ಲಭ್ಯವಾಗುತ್ತಿಲ್ಲ. ಆದ್ದರಿಂದ ತಾಲ್ಲೂಕು ಮಟ್ಟದಲ್ಲಿ ಪ್ರಯೋಗಾಲಯ ಆರಂಭಿಸಿ ಆಯಾಯ ದಿನವೇ ವರದಿ ನೀಡುವಂತಾಗಬೇಕು ಎಂದು ಜಿ.ಪಂ. ಸದಸ್ಯರು ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ ಅವರು ಕೋವಿಡ್ ಪ್ರಯೋಗಾಲಯ ಆರಂಭಿಸಲು ಒಂದೂವರೆ ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.
ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿಯೂ ಕೋವಿಡ್ ಪ್ರಯೋಗಾಲಯ ಆರಂಭಿಸಿದೆ. ಕೋವಿಡ್ ಪ್ರಯೋಗಾಲಯದಲ್ಲಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಲಾಕ್‍ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವ ರೀತಿಯ ತೊಂದರೆ ಆಯಿತು ಎಂಬ ಬಗ್ಗೆ ಪ್ರಸ್ತಾಪಿಸಿದ ಶಿವು ಮಾದಪ್ಪ ಅವರು ಬಾಳೆಲೆ ಮತ್ತು ಕುಟ್ಟ ಭಾಗದ ಜನರು ಕುಶಾಲನಗರ ಮಾರ್ಗವೇ ತೆರಳಬೇಕು ಎಂಬ ಆದೇಶದಿಂದ ತುಂಬಾ ತೊಂದರೆ ಅನುಭವಿಸುವಂತಾಯಿತು ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಅನುಪಾಲನಾ ವರದಿಯಂತೆ ಸಭೆಯನ್ನು ನಡೆಸೋಣ ಎಂದರು.
ಬಾನಂಡ ಪ್ರತ್ಯು, ಅನುಪಾಲನಾ ವರದಿಗೆ ನಮ್ಮ ಒಪ್ಪಿಗೆ ಇದ್ದು, ಇತರ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಬೇಕು ಎಂದು ಸಭೆಯ ಗಮನ ಸೆಳೆದರು.
ಜಿಲ್ಲೆಯಲ್ಲಿ ಈಗಾಗಲೇ 380 ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಈ ಸಂಬಂಧ ಕೋವಿಡ್-19 ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಶಿವುಮಾದಪ್ಪ ಅವರು ಒತ್ತಾಯಿಸಿದರು.
ಈಗಾಗಲೇ ಹೋಂ ಸ್ಟೇಗಳು, ರೆಸಾರ್ಟ್‍ಗಳನ್ನು ತೆರೆಯಲು ಅವಕಾಶ ಮಾಡಲಾಗಿದೆ. ಇದರಿಂದ ಕೋವಿಡ್ ನಿಯಂತ್ರಣ ಸಾಧ್ಯವೇ ಎಂದು ಶಿವುಮಾದಪ್ಪ ಅವರು ಪ್ರಶ್ನಿಸಿದರು.
ಜಿಲ್ಲೆಯ ಗಡಿಭಾಗಗಳಲ್ಲಿಯೂ ಸಹ ಮದ್ಯ ಮಾರಾಟಕ್ಕೆ ಮುಕ್ತಗೊಳಿಸಲಾಗಿದೆ. ಆದರೆ ಕೇರಳ ರಾಜ್ಯದ ಗಡಿಭಾಗವನ್ನು ಬಂದ್ ಮಾಡಿರುವುದಾದರೂ ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರಾದ ಸುನಿತಾ ಅವರು ಕೋವಿಡ್ ಪರೀಕ್ಷೆ ಸಂಬಂಧಿಸಿದಂತೆ ತಾಯಿ ಮತ್ತು ಮಗು ಜೊತೆಗೆ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಮಗುವಿಗೆ ಮಾತ್ರ ಕೋವಿಡ್ ಪರೀಕ್ಷೆ ಮಾಡುತ್ತಾರೆ. ಆದರೆ ತಾಯಿಯನ್ನು ಏಳು ದಿನದ ನಂತರ ಕೋವಿಡ್ ಪರೀಕ್ಷೆಗೆ ಆಹ್ವಾನಿಸುತ್ತಾರೆ. ಇದು ಸರಿಯೇ ಎಂದು ಅವರು ಪ್ರಶ್ನಿಸಿದರು.
ಈ ಕುರಿತು ಮಾಹಿತಿ ನೀಡಿದ ಡಿಎಚ್‍ಒ ಮೋಹನ್ ಅವರು ಮಗು ಪರೀಕ್ಷಿಸಿದ ನಂತರ ವರದಿ ನೋಡಿಕೊಂಡು ಪ್ರಾಥಮಿಕ ಸಂಪರ್ಕದಲ್ಲಿರುವರನ್ನು ಗಮನಿಸಿ ಪರೀಕ್ಷೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟ ಪಡಿಸಿದರು.
ಒಂದು ದಿನಕ್ಕೆ 300 ರಿಂದ 400 ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದುವರೆಗೆ 15,250 ಆರ್‍ಟಿಪಿಇಆರ್ ಪರೀಕ್ಷೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸದಸ್ಯರಾದ ಅಪ್ಪಚಂಡ ಮಹೇಶ್ ಅವರು ಮಾತನಾಡಿ ಸೀಲ್‍ಡೌನ್ ಮಾಡುವ ಕಡೆಗಳಲ್ಲಿ ಕುಟುಂಬಗಳು ತುಂಬಾ ಸಂಕಷ್ಟ ಅನುಭವಿಸುತ್ತಾರೆ. ಆದ್ದರಿಂದ ಸೀಲ್‍ಡೌನ್ ಮಾಡುವ ಕಡೆಗಳಲ್ಲಿ ಆಹಾರ ಮತ್ತು ತರಕಾರಿಯನ್ನು ಉಚಿತವಾಗಿ ಪೂರೈಸಬೇಕು ಎಂದು ಅವರು ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ಪಂಕಜ, ಸುನಿತಾ, ಪ್ರತ್ಯು, ಶಿವುಮಾದಪ್ಪ, ಕೆ.ಪಿ.ಚಂದ್ರಕಲಾ ಅವರು ಧ್ವನಿಗೂಡಿಸಿದರು.
ಸದಸ್ಯರಾದ ಬಾನಂಡ ಪ್ರತ್ಯು ಅವರು ಒಬ್ಬ ಕೋವಿಡ್ ಸೋಂಕಿತರಿಗೆ ದಿನಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖಾ ಅಧಿಕಾರಿಗಳು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಮಾಹಿತಿ ನೀಡಿದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ ಅವರು ಒಬ್ಬರಿಗೆ ಇಂತಿಷ್ಟು ವೆಚ್ಚವಾಗಲಿದೆ ಎಂದು ಹೇಳಲು ಬರುವುದಿಲ್ಲ. ಕೋವಿಡ್ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ವಾರ್ಡ್, ಮಕ್ಕಳ ವಾರ್ಡ್, ಕೋವಿಡ್ ಕೇರ್ ಸೆಂಟರ್ ಹೀಗೆ ಎಲ್ಲಾ ಕಡೆಯು ಗಮನಹರಿಸಬೇಕಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಪ್ರಕೃತಿ ವಿಕೋಪದಡಿ ಹಣ ಖರ್ಚು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾನಂಡ ಪ್ರತ್ಯು ಅವರು ಒಬ್ಬ ಸೋಂಕಿತರಿಗೆ ಒಂದು ದಿನಕ್ಕೆ ಸರ್ಕಾರ ಎಷ್ಟು ಖರ್ಚು ಮಾಡುತ್ತಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿ ಅವರೇ ಸ್ಪಷ್ಟನೆ ನೀಡುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮೂಕೊಂಡ ಪಿ.ಸುಬ್ರಮಣಿ ಅವರು ಜಿಲ್ಲೆಯಲ್ಲಿ ವೈದ್ಯರು ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇವರಿಗೆ ಯಾವುದೇ ರೀತಿಯ ಕಿರುಕುಳ ನೀಡುವುದು ಬೇಡ ಎಂದು ಸಲಹೆ ಮಾಡಿದರು.
ಕೋವಿಡ್-19 ನಿಯಂತ್ರಣ ಕುರಿತು ಮೂಕೊಂಡ ಪಿ.ಸುಬ್ರಮಣಿ ಹಾಗೂ ಮೂಕೊಂಡ ವಿಜು ಸುಬ್ರಮಣಿ, ಕಿರಣ್ ಕಾರ್ಯಪ್ಪ, ಶ್ರೀನಿವಾಸ್, ಅಪ್ಪಚಂಡ ಮಹೇಶ್ ಗಣಪತಿ, ಸಿ.ಪಿ.ಪುಟ್ಟರಾಜು, ಕವಿತಾ ಪ್ರಭಾಕರ್ ಇತರರು ವಿಷಯ ಪ್ರಸ್ತಾಪಿಸಿದರು.
ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್ ಅವರು ಕೊರೊನಾ ವೈರಸ್‍ನಿಂದಾಗಿ ಶಾಲೆಗಳು ಆರಂಭವಾಗಿಲ್ಲ. ಆ ನಿಟ್ಟಿನಲ್ಲಿ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಆದರೆ ಕರಿಕೆ, ಪೆರಾಜೆ, ಚೆಂಬು ಮತ್ತಿತರ ಕುಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಹಾಗೂ ಅಂತರ್ಜಾಲ ಸಮಸ್ಯೆ ಇದೆ. ಆದ್ದರಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡುತ್ತಿದ್ದೀರ ಎಂದು ವಿಷಯ ಪ್ರಸ್ತಾಪಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೂರದರ್ಶನ ಚಂದನ ವಾಹಿನಿ ಮೂಲಕ ಪಾಠ ಭೋದನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಹಲವು ಕಡೆಗಳಲ್ಲಿ ಸಮುದಾಯ ಭವನಗಳಲ್ಲಿ ಚಂದನ ವಾಹಿನಿ ಮೂಲಕ ಪಾಠ ನಡೆಯುತ್ತಿದೆ. ಸಮುದಾಯ ಭವನ ಒದಗಿಸಿದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಥಳೀಯವಾಗಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಮೂಕೊಂಡ ಪಿ.ಸುಬ್ರಮಣಿ ಅವರು ಮಾತನಾಡಿ ಮೂರ್ನಾಡು ಶಾಲೆಯಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ಮಾಡಿದರು.
ಈ ಬಗ್ಗೆ ಮಾಹಿತಿ ನೀಡಿದ ಡಿಡಿಪಿಐ ಪಿ.ಎಸ್.ಮಚ್ಚಾಡೋ ಅವರು ಐದು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಪಂಕಜ ಅವರು ಮಾತನಾಡಿ ತಿತಿಮತಿ ಪ್ರೌಢಶಾಲೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದರು.
ಶಿವುಮಾದಪ್ಪ ಅವರು ಮಾತನಾಡಿ ಜಿಲ್ಲೆಯ ಹಲವು ರಸ್ತೆಗಳು ಹದಗೆಟ್ಟಿದ್ದು, ಇದನ್ನು ಸರಿಪಡಿಸಬೇಕು. ಆದರೆ ಪೊನ್ನಂಪೇಟೆ ತಾಲ್ಲೂಕಿನ ತಾಕೂರು ಹಳೇ ಸೇತುವೆಗೆ ಸುಣ್ಣ ಬಳಿಯಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.
ಅಪ್ಪಚಂಡ ಮಹೇಶ್ ಅವರು ಕೊಣನೂರು-ಮಾಕುಟ್ಟ ರಸ್ತೆ ಅರ್ಧಕ್ಕೆ ನಿಂತಿದ್ದು, ಇದನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

ಸದಸ್ಯರಾದ ಬಿ.ಜೆ.ದೀಪಕ್ ಅವರು ಸೋಮವಾರಪೇಟೆ ತಾಲ್ಲೂಕಿನಲ್ಲಿ ಹಲವು ರಸ್ತೆಗಳು ಹದಗೆಟ್ಟಿವೆ. ಇದನ್ನು ಸರಿಪಡಿಸಬೇಕು ಎಂದರು.
ಸರೋಜಮ್ಮ ಅವರು ಮಾತನಾಡಿ ತೋಳೂರು ಶೆಟ್ಟಳ್ಳಿ ರಸ್ತೆ ನಿರ್ಮಾಣಕ್ಕೆ ಜಲ್ಲಿಕಲ್ಲು ಸುರಿಯಲಾಗಿತ್ತು, ಆದರೆ ಕಾಮಗಾರಿ ಆರಂಭಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಡಾನೆ ಹಾವಳಿ, ಹುಲಿ ದಾಳಿಯನ್ನು ನಿಯಂತ್ರಿಸಬೇಕಿದೆ. ಕಳೆದ ಹಲವು ವರ್ಷಗಳಿಂದ ಕಾಡಾನೆ ಹಾಗೂ ಹುಲಿಗಳ ನಡುವೆ ಬದುಕಿದ್ದೇವೆ. ಇನ್ನು ಮುಂದೆ ಬದುಕಲು ಅಸಾಧ್ಯ ಎಂದು ಮೂಕೊಂಡ ವಿಜು ಸುಬ್ರಮಣಿ ಅವರು ಬೇಸರ ವ್ಯಕ್ತಪಡಿಸಿದರು.
ಅಪ್ಪಚಂಡ ಮಹೇಶ್ ಅವರು ಮಾತನಾಡಿ ತೋರ, ಹೆಗ್ಗಳ ಮತ್ತಿತರ ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಆದ್ದರಿಂದ ಆನೆ ಕಂದಕ ನಿರ್ಮಾಣ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮಧ್ಯಪ್ರವೇಶಿಸಿ ಮಾತನಾಡಿದ ಸುನಿತಾ ಅವರು ನೆಲ್ಯಹುದಿಕೇರಿ ಭಾಗದಲ್ಲಿ ಕಾಡಾನೆಗಳನ್ನು ಓಡಿಸಲಾಗುತ್ತದೆ. ಇದರಿಂದ ಸಾಕಷ್ಟು ಬೆಳೆ ಹಾನಿ ಉಂಟಾಗಲಿದೆ. ಬೆಳೆ ಹಾನಿ ಪರಿಹಾರ ಕೊಡುವವರು ಯಾರು ಎಂದು ಅವರು ಪ್ರಶ್ನಿಸಿದರು.
ಈ ಬಗ್ಗೆ ಲತೀಪ್ ಅವರು ಕಾಡಾನೆಗಳನ್ನು ಓಡಿಸಬೇಕು. ಜೊತೆಗೆ ಕಾಫಿ ಗಿಡ ನಷ್ಟವಾದಲ್ಲಿ ಕಾಫಿ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕುಡಿಯುವ ನೀರು ಪೂರೈಕೆ ಸಂಬಂಧ ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಹಣ ಪಾವತಿಸಲು ವಿಳಂಬವಾಗುತ್ತಿದೆ. ವಿದ್ಯುತ್ ಇಲಾಖೆಗೆ ಹಣ ಪಾವತಿಗೆ ಬಾಕಿ ಇದ್ದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು ಎಂದು ಜಿ.ಪಂ. ಅಧ್ಯಕ್ಷರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಸಂಬಂಧಪಟ್ಟ ಇಲಾಖೆ ಆಯುಕ್ತರಿಗೆ ಪತ್ರ ಬರೆಯುವಂತೆ ಎಂಜಿನಿಯರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್ ಅವರು ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದ್ದ 4,334 ಕುಟುಂಬಗಳಲ್ಲಿ 3,300 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ 850 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ. ಜೊತೆಗೆ ಚೈನಿಹಡ್ಲು, ಬೊಮ್ಮಾಡು ಮತ್ತಿತರ ನಾಲ್ಕು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದೆ ಎಂದು ಅವರು ತಿಳಿಸಿದರು. ಮಾಲಂಬಿ ಹಾಡಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸಬೇಕು ಎಂದು ಸರೋಜಮ್ಮ ಅವರು ಗಮನ ಸೆಳೆದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ವಿದ್ಯುತ್ ಮಾರ್ಗ ಹೋಗಿರುವ ಕಡೆ ಆಗಾಗ ಗಮನಿಸಬೇಕಿದೆ. ವಿದ್ಯುತ್ ತಂತಿಗಳು ಮರಕ್ಕೆ ತಾಗುವ ಹಾಗೂ ನೆಲಕ್ಕೆ ಬೀಳುವ ಹಂತದಲ್ಲಿದ್ದು, ಈ ಬಗ್ಗೆ ಪರಿಶೀಲಿಸಬೇಕಿದೆ ಎಂದು ಅವರು ತಿಳಿಸಿದರು.
ಸದಸ್ಯರಾದ ಪಂಕಜ ಅವರು ಮಾತನಾಡಿ ಹಾಡಿಗಳಲ್ಲಿ ಐಟಿಡಿಪಿ ಇಲಾಖೆಯಿಂದ ಸಾಕಷ್ಟು ಕೆಲಸಗಳು ಆಗುತ್ತಿವೆ. ಅದಕ್ಕೆ ಸೆಸ್ಕ್ ಇಲಾಖೆಯವರು ಅಗತ್ಯ ಸಹಕಾರ ನೀಡಬೇಕಿದೆ ಎಂದು ಅವರು ಸಲಹೆ ಮಾಡಿದರು.
ಜಿಲ್ಲೆಯ ಹಲವು ಹಾಡಿಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಗಿರಿಜನರು ಇನ್ನೂ ಸಹ ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದಾರೆ. ವಿರಾಜಪೇಟೆ ತಾಲ್ಲೂಕಿನ 56 ಹಾಡಿಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ತಲುಪಿಲ್ಲ. ನಮ್ಮ ಅವಧಿ ಮುಗಿಯುತ್ತಾ ಬರುತ್ತಿದೆ ಎಂದು ನೋವು ತೋಡಿಕೊಂಡರು.
ಲೋಕೋಪಯೋಗಿ ಇಲಾಖೆಗೆ ರಸ್ತೆ, ಸೇತುವೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರ ಮಾರ್ಚ್ ತಿಂಗಳಲ್ಲಿ 14 ಕೋಟಿ ರೂ. ಬಿಡುಗಡೆ ಮಾಡಿತ್ತು, ಆದರೆ ಈ ಅನುದಾನ ವ್ಯಪಗತವಾಗಿರುವುದಕ್ಕೆ ಜಿ.ಪಂ.ಸದಸ್ಯರಾದ ಮುರಳಿ ಕರುಂಬಮ್ಮಯ್ಯ ಅವರು ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮದನ್ ಮೋಹನ್ ಅವರು ಮಾರ್ಚ್ ಕೊನೆ ವಾರದಲ್ಲಿ ಬಿಲ್ಲನ್ನು ಖಜಾನೆಗೆ ಸಲ್ಲಿಸಲಾಗಿತ್ತು, ಆದರೆ ಜಿಲ್ಲಾ ಖಜಾನಾಧಿಕಾರಿಯವರು ಬಿಲ್ಲನ್ನು ತಡೆಹಿಡಿದ ಪರಿಣಾಮ ಹಣ ವ್ಯಪಗತವಾಗುವಂತಾಯಿತು ಎಂದು ಅವರು ದೂರಿದರು.
ಈ ಬಗ್ಗೆ ಜಿಲ್ಲಾ ಖಜಾನಾಧಿಕಾರಿಯವರು ಮಾಹಿತಿ ನೀಡಿ ಆರ್ಥಿಕ ಇಲಾಖೆಯ ನಿರ್ದೇಶನದಂತೆ ಕ್ರಮವಹಿಸಲಾಗಿದೆ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದರು.
ಸರ್ಕಾರದ ನಿರ್ದೇಶನ ಜೊತೆಗೆ, ಮಾನವೀಯತೆ ದೃಷ್ಟಿಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಹಣ ವ್ಯಪಗತವಾಗಿರುವುದರಿಂದ ಜಿಲ್ಲೆಗೆ ನಷ್ಟವಲ್ಲವೇ ಎಂದು ಮುರಳಿ ಕರುಂಬಮಯ್ಯ ಅವರು ಖಾರವಾಗಿ ನುಡಿದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ಭವ್ಯ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಆರ್.ಮಂಜುಳ, ಸದಸ್ಯರಾದ ಎಚ್.ಆರ್.ಶ್ರೀನಿವಾಸ್, ಲೀಲಾವತಿ, ಯಾಲದಾಳು ಪದ್ಮಾವತಿ, ಕುಮುದ ಧರ್ಮಪ್ಪ, ಬಿ.ಜೆ.ದೀಪಕ್, ತಾ.ಪಂ.ಅಧ್ಯಕ್ಷರಾದ ತೆಕ್ಕಡೆ ಶೋಭ ಮೋಹನ್ ಅವರು ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು.